ಬೆಂಗಳೂರು:ಇಂದಿನಿಂದ ಎರಡು ತಿಂಗಳ ಕಾಲ ಐಪಿಎಲ್ ಹಬ್ಬ. ಇಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಕಳೆದ ವರ್ಷ
ಆರನೇ ಸ್ಥಾನ ಪಡೆದಿದ್ದ ಎಸ್ಆರ್ಎಚ್ ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಗಾಯಗೊಂಡಿರುವ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಫೋಟಕ ಆರಂಭಿಕ ಆಟಗಾರ ಇಶಾನ್ ಕಿಶನ್ ಹೈದರಾಬಾದ್ ತಂಡದ ನಾಯಕತ್ವ ವಹಿಸಲಿದ್ದಾರೆ. ಎಸ್ಆರ್ಎಚ್ನ ಅಗ್ರ ಸರದಿಯಲ್ಲಿ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾರಂತಹ ಆಟಗಾರರಿದ್ದಾರೆ. ಈ ಇಬ್ಬರು ಕಳೆದ ಎರಡು ವರ್ಷಗಳಿಂದ ಪವರ್ ಹಿಟ್ಟಿಂಗ್ ಸಾಮರ್ಥ್ಯದಿಂದ ಇತರ ಎಲ್ಲ ತಂಡಗಳ ನಿದ್ದೆಗೆಡಿಸಿದ್ದರು. 2024ರಲ್ಲಿ ಎಸ್ಆರ್ಎಚ್ ರನ್ನರ್ಸ್ ಅಪ್ ಆಗಿತ್ತು.
ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟರ್ಗಳ ಸ್ವರ್ಗವಾಗಿದ್ದು, ಸರಾಸರಿ ಸ್ಕೋರ್ ಸುಮಾರು 194 ರನ್. ಬೌಂಡರಿಲೈನ್ ಚಿಕ್ಕದಾಗಿರುವ ಕಾರಣ ಬೌಲರ್ಗಳು ಹೆಚ್ಚು ದಂಡಿಸಲ್ಪಡಲಿದ್ದಾರೆ. ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ ತಂಡವು ಸಮತೋಲಿತವಾಗಿದ್ದು, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಕನ್ನಡಿಗ ದೇವದತ್ತ ಪಡಿಕ್ಕಲ್ ಅಪಾಯಕಾರಿ ಬ್ಯಾಟರ್ ಆಗಿದ್ದಾರೆ. ಈ ಬಾರಿ ವೆಂಕಟೇಶ್ ಅಯ್ಯರ್, ಜೇಕಬ್ ಡಫಿ ಹಾಗೂ ಜೋರ್ಡನ್ ಕಾಕ್ಸ್ ಸೇರ್ಪಡೆಯಾಗಿದ್ದಾರೆ. ಫಿಲ್ ಸಾಲ್ಟ್, ಜೇಕಬ್ ಬೆಥೆಲ್, ಟಿಮ್ ಡೇವಿಡ್ ಹಾಗೂ ರೊಮಾರಿಯೊ ಶೆಫರ್ಡ್ ಆರ್ಸಿಬಿಗೆ ಸತತ ಎರಡನೇ ಪ್ರಶಸ್ತಿ ಗೆದ್ದುಕೊಡುವ ವಿಶ್ವಾಸ ಮೂಡಿಸಿದ್ದಾರೆ. ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ ಅವರು ಕೃನಾಲ್ ಪಾಂಡ್ಯ ಜೊತೆಗೂಡಿ ಮಧ್ಯಮ ಓವರ್ಗಳಲ್ಲಿ ನಿರ್ಣಾಯಕ ಪಾತ್ರವಹಿಸಬಹುದು. ರನ್ ವೇಗಕ್ಕೆ ಕಡಿವಾಣ ಹಾಕಿ ವಿಕೆಟ್ ಉರುಳಿಸಬಹುದು. ವೆಂಕಟೇಶ್ ಅಯ್ಯರ್ ಆಲ್ರೌಂಡ್ ಪ್ರದರ್ಶನ ನೀಡಬಲ್ಲರು.
ಆರ್ಸಿಬಿ-ಎಸ್ಆರ್ಎಚ್ ತಂಡಗಳು ಚಿನ್ನಸ್ವಾಮಿ ಮೈದಾನದಲ್ಲಿ 2024ರಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಇಲ್ಲಿ ಎಸ್ಆರ್ಎಚ್ ತಂಡದ ವಿರುದ್ಧದ ಹೆಡ್-ಟು-ಹೆಡ್ ದಾಖಲೆಯಲ್ಲಿ ಆರ್ಸಿಬಿ ಮೇಲುಗೈ ಸಾಧಿಸಿದೆ. 8 ಪಂದ್ಯಗಳ ಪೈಕಿ ಆರ್ಸಿಬಿ ಐದರಲ್ಲಿ ಜಯ ಸಾಧಿಸಿದ್ದು, ಎಸ್ಆರ್ಎಚ್ ಮೂರರಲ್ಲಿ ಗೆಲುವು ಪಡೆದಿದೆ.
ತಂಡಗಳು
ಆರ್ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ಕೀಪರ್), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಯಶ್ ದಯಾಳ್, ಜೇಕಬ್ ಡಫಿ, ಸುಯಶ್ ಶರ್ಮಾ(ಇಂಪ್ಯಾಕ್ಟ್ ಪ್ಲೇಯರ್)
ಎಸ್ಆರ್ಎಚ್:
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್(ನಾಯಕ), ಹೆನ್ರಿಕ್ ಕ್ಲಾಸನ್, ನಿತೀಶ್ ಕುಮಾರ್ ರೆಡ್ಡಿ, ಲಿಯಾಮ್ ಲಿವಿಂಗ್ಸ್ಟೋನ್, ಅನಿಕೇತ್ ವರ್ಮಾ, ಹರ್ಷ ದುಬೆ, ಹರ್ಷಲ್ ಪಟೇಲ್, ಇಶಾನ್ ಮಾಲಿಂಗ, ಜಯದೇವ್ ಉನದ್ಕಟ್, ಝೀಶನ್ ಅನ್ಸಾರಿ(ಇಂಪ್ಯಾಕ್ಟ್ ಪ್ಲೇಯರ್).










