ಕೊಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಇಂದು ಚಾಲನೆ ದೊರೆಯಲಿದೆ. ಇಂದಿನಿಂದ ಮೇ 25ರವರೆಗೆ ಈ ಕ್ರಿಕೆಟ್ ಉತ್ಸವ ನಡೆಯಲಿದ್ದು, 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಹೊಸ ನಿಯಮಗಳು ರೋಚಕತೆ ಹೆಚ್ಚಿಸುವ ನಿರೀಕ್ಷೆ ಇದೆ. ಮೊದಲ ಪಂದ್ಯದಲ್ಲಿ ನೂತನ ನಾಯಕ, ಹೊಸದಾಗಿ ಬಂದ ಆಟಗಾರರ ಸಂಯೋಜನೆಯೊಡನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಶನಿವಾರ ಎದುರಿಸಲಿದೆ. ರಜತ್ ಪಾಟೀದಾರ್ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೇತೃತ್ವ ವಹಿಸಿದ್ದಾರೆ.ಕೋಲ್ಕತ್ತ ತಂಡ ಮೂರು ಬಾರಿ ಚಾಂಪಿಯನ್ ಆಗಿದೆ. ಆರ್ಸಿಬಿಗೆ ಮಾತ್ರ ಪ್ರಶಸ್ತಿ ಇನ್ನೂ ಕೈಗೆಟುಕಿಲ್ಲ.
ಕೋಲ್ಕತ್ತ ತಂಡದ ನಾಯಕತ್ವವೂ ಬದಲಾವಣೆಯಾಗಿದ್ದು, ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಸಾರಥ್ಯ ವಹಿಸಿದ್ದಾರೆ.ಆರ್ಸಿಬಿ ಬ್ಯಾಟಿಂಗ್ ಕ್ರಮಾಂಕದಲ್ಲೂ ಹೊಸತನ ಕಾಣಲಿದೆ. ಕೊಹ್ಲಿ ಅವರೊಂದಿಗೆ ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟಗಾರ ಫಿಲ್ ಸಾಲ್ಟ್ ಆಡಲು ಇಳಿಯಲಿದ್ದಾರೆ. ತಂಡದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್, ಟಿಮ್ ಡೇವಿಡ್, ಜಿತೇಶ್ ಶರ್ಮಾ ಅಂಥ ನುರಿತ ಫಿನಿಷರ್ಗಳಿದ್ದಾರೆ.
ಅನುಭವಿ ಮೊಹಮ್ಮದ್ ಸಿರಾಜ್ ಅವರ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಹೊಣೆ ಜೋಶ್ ಹ್ಯಾಜಲ್ವುಡ್ ಮತ್ತು ಅನುಭವಿ ಭುವನೇಶ್ವರ ಕುಮಾರ್ ಹೆಗಲೇರಲಿದೆ. ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್ ಅಂಥ ಆಲ್ರೌಂಡರ್ಗಳೂ ತಂಡದಲ್ಲಿದ್ದಾರೆ.
ಈ ಬಾರಿ ಐಪಿಎಲ್ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ನಾಯಕರನ್ನು ಕಾಣುತ್ತಿದೆ.
ಭಾರತ ತಂಡದಲ್ಲಿ ಒಂದೂ ಟಿ20 ಪಂದ್ಯ ಆಡದ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಅಂಥ ಅನುಭವಿಯಿದ್ದರೂ ಆರ್ಸಿಬಿ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಅಕ್ಷರ್ ಪಟೇಲ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಸಾರಥ್ಯ ಒಲಿದಿದೆ. ಈ ಹಿಂದಿನ ಋತುವಿನಲ್ಲಿ ಕೋಲ್ಕತ್ತ ತಂಡಕ್ಕೆ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್ ಕಿಂಗ್ಸ್ ನಾಯಕ. ಅವರ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಅವರು ಕೋಲ್ಕತ್ತ ನೈಟ್ ರೈಡರ್ಸ್ ಕಪ್ತಾನರಾಗಿದ್ದಾರೆ. ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿ ರುವ ಸಂಜು ಸ್ಯಾಮ್ಸನ್ ಬದಲು ಯುವ ಬ್ಯಾಟರ್ ರಿಯಾನ್ ಪರಾಗ್ ಮೊದಲ ಮೂರು ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್ ತಂಡದ ನೇತೃತ್ವ ವಹಿಸುವರು.
ಮೂರು ಪಂದ್ಯಗಳಲ್ಲಿ ನಿಗದಿತ ಅವಧಿಯಲ್ಲಿ ಓವರುಗಳನ್ನು ಪೂರೈಸದ ಕಾರಣ ಹಾರ್ದಿಕ್ ಪಾಂಡ್ಯ ಅವರು ಒಂದು ಪಂದ್ಯದ ನಿಷೇಧ ಅನುಭವಿ ಸುತ್ತಿದ್ದು, ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯಕ್ಕೆ ನಾಯಕತ್ವವು ಸೂರ್ಯಕುಮಾರ್ ಯಾದವ್ ಹೆಗಲೇರಿದೆ.2024ರಲ್ಲಿ ಡೆಲ್ಲಿ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಅವರು ಈ ಸಲ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿ ದ್ದಾರೆ.ಜಸ್ಪ್ರೀತ್ ಬೂಮ್ರಾ ಅವರ ಫಿಟ್ನೆಸ್ ಕುರಿತು ಇನ್ನೂ ಸ್ಪಷ್ಟತೆ ಲಭಿಸಿಲ್ಲ. ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಅವರು ಆರೈಕೆಯಲ್ಲಿದ್ದು ಫಿಟ್ನೆಸ್ ಪರಿಶೀಲನೆಗೆ ಒಳಗಾಗಿದ್ದಾರೆ.
ಮೊದಲ ಪಂದ್ಯ ಆರ್ಸಿಬಿ Vs ಕೆಕೆಆರ್. ಪಂದ್ಯ ಆರಂಭ ರಾತ್ರಿ 7.30