ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗೆ ಇಂದು ವರ್ಣ ರಂಜಿತ ಚಾಲನೆ ದೊರೆಯಲಿದೆ. ಹತ್ತು ತಂಡಗಳು ಭಾಗವಹಿಸುವ ಪಂದ್ಯಾ ಕೂಟದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾ ಮುಖಿಯಾಗಲಿದೆ.
ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ಸೇರಿದಂತೆ ಪ್ರಮುಖ ತಾರೆಯರು ಪ್ರದರ್ಶನ ನೀಡಲಿದ್ದಾರೆ.ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲ ಪಂದ್ಯಕ್ಕೂ ಮುನ್ನ ವರ್ಣರಂಜಿತ ಸಮಾರಂಭ
ಆಯೋಜಿಸಲಾಗಿದೆ. ಸಮಾರಂಭ ಸಂಜೆ 6 ಕ್ಕೆ ಆರಂಭವಾಗಲಿದೆ.
ಈ ಬಾರಿಯ ಐಪಿಎಲ್ನಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಆಟದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ‘ಇಂಪ್ಯಾಕ್ಟ್ ಪ್ಲೇಯರ್’ ಬಳಕೆ, ಟಾಸ್ ಬಳಿಕ ಅಂತಿಮ ಇಲೆವೆನ್ ಆಯ್ಕೆ, ವೈಡ್ ಮತ್ತು ನೋಬಾಲ್ಗೂ ಡಿಆರ್ಎಸ್ ಪಡೆದುಕೊಳ್ಳುವ ಅವಕಾಶವನ್ನು ಈ ಬಾರಿ ನೀಡಲಾಗಿದೆ. ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮದ ಪ್ರಕಾರ ತಂಡಗಳು ಅಂತಿಮ ಇಲೆವೆನ್ ಜತೆಗೆ, ಐವರು ಬದಲಿ ಆಟಗಾರರನ್ನು ಕೂಡಾ ಹೆಸರಿಸಬೇಕು. ಅದರಲ್ಲಿ ಒಬ್ಬ ಆಟಗಾರ (ಇಂಪ್ಯಾಕ್ಟ್ ಪ್ಲೇಯರ್) ಪಂದ್ಯದ ಯಾವುದೇ ಹಂತದಲ್ಲಿ ಆರಂಭಿಕ ಇಲೆವೆನ್ನ ಆಟಗಾರರನ್ನು ಬದಲಾಯಿಸಿ ಕಣಕ್ಕಿಳಿಯಬಹುದು. ಇನಿಂಗ್ಸ್ನ 14ನೇ ಓವರ್ನ ಮುಕ್ತಾಯಕ್ಕೆ ಮುನ್ನ ಈ ಬದಲಾವಣೆ ಮಾಡಬೇಕು.
ಬ್ಯಾಟ್ ಮಾಡುವ ತಂಡವು ಔಟಾದ ಅಥವಾ ನಿವೃತ್ತಿಗೊಂಡು ಪೆವಿಲಿಯನ್ ಮರಳಿದ ಬ್ಯಾಟರ್ಗೆ ಬದಲಿಯಾಗಿ ಇಂಪ್ಯಾಕ್ಟ್ ಪ್ಲೇಯರ್ಅನ್ನು ಕಣಕ್ಕಿಳಿಸಿದರೂ 11 ಆಟಗಾರರಿಗಷ್ಟೇ ಬ್ಯಾಟ್ ಮಾಡಲು ಅವಕಾಶವಿದೆ.
ಟಾಸ್ ಆದ ಬಳಿಕ ಅಂತಿಮ ಇಲೆವೆನ್ ಆಯ್ಕೆ ಮಾಡುವ ಅವಕಾಶವನ್ನು ತಂಡಗಳಿಗೆ ನೀಡಲಾಗಿದೆ. ‘ಪ್ರತಿ ತಂಡದ ನಾಯಕರು ಆಡುವ 11 ಮಂದಿ ಆಟಗಾರರು ಮತ್ತು ಐವರು ಸಬ್ಸ್ಟಿಟ್ಯೂಟ್ ಫೀಲ್ಡರ್ಗಳ ಹೆಸರನ್ನು ಟಾಸ್ ಬಳಿಕ ಮ್ಯಾಚ್ ರೆಫರಿಗೆ ನೀಡಬಹುದು’ ಎಂದು ಹೊಸ ನಿಯಮ ಹೇಳಿದೆ.
ಟಾಸ್ ಬಳಿಕ ಅಂತಿಮ ಹನ್ನೊಂದರ ಬಳಗದಲ್ಲಿ ಏನಾದರೂ ಬದಲಾವಣೆ ಬಯಸಿದರೆ, ಹೊಸ ನಿಯಮವು ಅದಕ್ಕೆ ಅವಕಾಶ ಕಲ್ಪಿಸಿದೆ.
ಉದ್ಘಾಟನಾ ಸಮಾರಂಭದ ಬಳಿಕ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ ವಿರುದ್ಧ ಕಣಕ್ಕಿಳಿಯಲಿದೆ. ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಉಭಯ ತಂಡಗಳಲ್ಲಿಯೂ ಉತ್ತಮ ಆಲ್ರೌಂಡರ್ಗಳು ಇರುವುದರಿಂದ ರೋಚಕ ಹಣಾಹಣಿ ನಡೆಯುವ ನಿರೀಕ್ಷೆ ಇದೆ.
ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರಸಿಂಗ್ ಧೋನಿ (ನಾಯಕ/ವಿಕೆಟ್ಕೀಪರ್), ಋತುರಾಜ್ ಗಾಯಕವಾಡ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಮೋಯಿನ್ ಅಲಿ, ಬೆನ್ ಸ್ಟೋಕ್ಸ್, ಶಿವಂ ದುಬೆ, ರವೀಂದ್ರ ಜಡೇಜ, ಡ್ವೇನ್ ಪ್ರಿಟೊರಿಯಸ್, ಮಿಚೆಲ್ ಸ್ಯಾಂಟನರ್, ಡೆವೊನ್ ಕಾನ್ವೆ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರೇಕರ್, ಸಿಸಾಂದಾ ಮಗಾಲ, ಅಜಯ್ ಮಂಡ್, ಮುಖೇಶ್ ಚೌಧರಿ, ಮಹೀಷ ತೀಕ್ಷಣ, ಪ್ರಶಾಂತ್ ಸೋಳಂಕಿ, ಸಿಮರಜೀತ್ ಸಿಂಗ್.
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಕೇನ್ ವಿಲಿಯಮ್ಸನ್, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಶಿವಂ ಮಾವಿ, ಶ್ರೀಕರ್ ಭರತ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ (ಮೂವರು ವಿಕೆಟ್ಕೀಪರ್), ಅಲ್ಜರಿ ಜೋಸೆಫ್, ಜೋಶುವಾ ಲಿಟಲ್, ಮೊಹಮ್ಮದ್ ಶಮಿ, ನೂರ್ ಅಹಮದ್, ರವಿಶ್ರೀನಿವಸಾನ್ ಸಾಯಿಕಿಶೋರ್, ಪ್ರದೀಪ್ ಸಂಗ್ವಾನ್, ಮೋಹಿತ್ ಶರ್ಮಾ, ಒಡಿಯನ್ ಸ್ಮಿತ್, ಜಯಂತ್ ಯಾದವ್, ಯಶ್ ದಯಾಳ್.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್, ಜಿಯೊ ಸಿನೆಮಾ ಆ್ಯಪ್