ಚೆನ್ನೈ: ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ತಂಡವನ್ನು ಮಣಿಸಿ, ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಚೆನ್ನೈ 10ನೇ ಬಾರಿ ಫೈನಲ್ ಪ್ರವೇಶಿಸಿದಂತಾಗಿದೆ.ಸೋತ ಗುಜರಾತ್ ತಂಡ ಬುಧವಾರ ನಡೆಯುವ ಮುಂಬೈ ಮತ್ತು ಲಕ್ನೋ ವಿರುದ್ಧದ ಪಂದ್ಯದ ವಿಜೇತರನ್ನು ದ್ವಿತೀಯ
ಕ್ವಾಲಿಫೈಯರ್ ಪಂದ್ಯದಲ್ಲಿ ಎದುರಿಸಲಿದೆ. ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಗುಜರಾತ್ 20 ಓವರ್ನಲ್ಲಿ 157 ರನ್ಗಳಿಗೆ ಸರ್ವಪತನ ಕಂಡು 15 ರನ್ಗಳಿಂದ ಸೋಲೊಪ್ಪಿಕೊಂಡಿತು.
22 ರನ್ಗೆ ಮೊದಲ ವಿಕೆಟ್ ಕಳೆದುಕೊಂಡು ಗುಜರಾತ್ ಆರಂಭಿಕ ಆಘಾತ ಎದುರಿಸಿತು. ವೃದ್ಧಿಮಾನ್ ಸಾಹಾ 15 ರನ್ ಬಾರಿಸಿ ಔಟಾದರು. ನಾಯಕ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಕೈಚೆಲ್ಲಿದರು. 7 ಎಸೆತಗಳಲ್ಲಿ 8 ರನ್ ಗಳಿಸಿದರು. ಡೇವಿಡ್ ಮಿಲ್ಲರ್, ದಸುನ್ ಶಣಕ, ರಾಹುಲ್ ತೆವಾಟಿಯಾ ಪೆವಿಲಿಯನ್ ಪರೇಡ್ ನಡೆಸಿದರು. ಇವರ ಗಳಿಕೆ ಕೇವಲ ಒಂದಂಕಿಗೆ ಸೀಮಿತವಾಯಿತು.ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಶುಭಮನ್ ಗಿಲ್ ತಂಡದ ಗೆಲುವಿಗಾಗಿ ಶಕ್ತಿ ಮೀರಿ ಪ್ರದರ್ಶನ ತೋರಿದರು. ಆದರೆ ಇವರ ಆಟವೂ 42 ರನ್ಗೆ ಅಂತ್ಯಕಂಡಿತು. ಅಂತಿಮ ಹಂತದಲ್ಲಿ ವಿಜಯ್ ಶಂಕರ್ ಮತ್ತು ರಶೀದ್ ಖಾನ್ ಅವರು ಹೋರಾಟ ತೋರಿದರೂ ಚೆನ್ನೈ ತಂಡದ ಬೌಲರ್ಗಳು ಹಿಡಿತ ಸಾಧಿಸಿದ ಪರಿಣಾಮ ತಂಡ ಸೋಲು ಕಂಡಿತು. ರಶೀದ್ ಖಾನ್(30) ಗಳಿಸಿದರೆ, ವಿಜಯ್ ಶಂಕರ್ 14 ರನ್ ಬಾರಿಸಿ ಔಟಾದರು. ಚೆನ್ನೈ ಪರ ರವೀಂದ್ರ ಜಡೇಜಾ(2), ಮಹೀಶ್ ತೀಕ್ಷಣ(2), ದೀಪಕ್ ಚಹರ್(2) ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಬ್ಯಾಟಿಂಗ್ ಚೆನ್ನೈ ಪರ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅರ್ಧಶತಕ ಗಳಿಸಿ ಮಿಂಚಿದರು.
44 ಎಸೆತ ಎದುರಿಸಿದ ಗಾಯಕ್ವಾಡ್ 60 ರನ್ ಬಾರಿಸಿದರು. ಕಾನ್ವೆ 40, ಜಡೇಜ 22 ರನ್ ಸೇರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.