ಬಡ್ಡಡ್ಕ:ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಕೊಡಗು ಜಿಲ್ಲೆಗಳನ್ನು ಸಂಪರ್ಕಿಸುವ ಪೆರಾಜೆ-ಕೂರ್ನಡ್ಕ- ಬಡ್ಡಡ್ಕ- ಕಲ್ಲಪಳ್ಳಿ- ಪಾಣತ್ತೂರು ರಸ್ತೆ ಅಭಿವೃದ್ಧಿ ಕುರಿತು ಸಮಾಲೋಚನಾ ಸಭೆ ಬಡ್ಡಡ್ಕ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಮಲೆನಾಡು ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ರಸ್ತೆಯನ್ನು ಸರ್ವ ಋತು ರಸ್ತೆಯಾಗಿ ಅಭಿವೃದ್ಧಿ ಪಡಿಸಿ ಅಂತಾರಾಜ್ಯ ಕಾರಿಡಾರ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಲಾಯಿತು. ಈ ಹಿನ್ನಲೆಯಲ್ಲಿ
ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲು ನಿರ್ಧರಿಸಲಾಯಿತು. ಈ ರಸ್ತೆಯ ಅಭಿವೃದ್ಧಿ ಮೂರು ಜಿಲ್ಲೆಗಳ ಗಡಿಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಮುಂದಿನ ಯೋಜನೆಗಳ ರೂಪುರೇಷೆ ತಯಾರಿಸಲು ಅಂತಾರಾಜ್ಯ ಸಮನ್ವಯ ಸಮಿತಿಯನ್ನು ರಚಿಸಲಾಯಿತು.

ಮಡಿಕೇರಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಸಭೆಯನ್ನು ಉದ್ಘಾಟಿಸಿದರು.ಸಭೆಯ ಅಧ್ಯಕ್ಷತೆಯನ್ನು ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷೆ ವೀಣಾ ವಸಂತ್ ವಹಿಸಿದ್ದರು. ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್, ಪನತ್ತಡಿ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ಕಲ್ಲಪಳ್ಳಿ, ಆಲೆಟ್ಟಿ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ, ಕರಿಕೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೋಡಿ.ಕೆ.ಪೊನ್ನಪ್ಪ, ಮಲೆನಾಡು ಅಭಿವೃದ್ಧಿ ಸಮಿತಿಯ ಅಧ್ಯಕ್ಷ
ಆರ್.ಸೂರ್ಯನಾರಾಯಣ ಭಟ್, ಸಂಚಾಲಕ ಬಾಬು ಕದಳಿಮಟ್ಟಂ, ಪ್ರಧಾನ ಕಾರ್ಯದರ್ಶಿ ಬಿ. ಅನಿಲ್ ಕುಮಾರ್, ಖಜಾಂಜಿ ಅಜಿ ಜೋಸೆಫ್, ಪ್ರಮುಖರಾದ ನಂದ ಕುಮಾರ್ ಬಾಟೋಳಿ, ಪಿ.ವಿ.ಜಾರ್ಜ್,ಜಯಪ್ರಕಾಶ್ ಪೆರುಮುಂಡ, ಶಾಂತಾರಾಮ್ ಭಟ್ ಕಮ್ಮಾಡಿ, ಮನು ಪೆರುಮುಂಡ, ಹರೀಶ್ ಕೊಳಂಗಾಯ, ಕುಮಾರ್.ಎ.ಪಿ, ಜಗದೀಶ್ ಕಾಪುಮಲೆ ಮತ್ತಿತರರು ಉಪಸ್ಥಿತರಿದ್ದರು.
ಮಲೆನಾಡು ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಸೂರ್ಯನಾರಾಯಣ ಭಟ್ ಸ್ವಾಗತಿಸಿ, ಜಯಪ್ರಕಾಶ್ ಪೆರುಮುಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.ರಾಧಾಕೃಷ್ಣ ಗೌಡ ಕಲ್ಲಪಳ್ಳಿ ಯೋಜನೆಯ ರೂಪುರೇಷೆಗಳ ಬಗ್ಗೆ ವಿವರ ನೀಡಿದರು.

ಸಮನ್ವಯ ಸಮಿತಿ ರಚನೆ:
ರಸ್ತೆಯ ಅಭಿವೃದ್ಧಿ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸಲು ಅಂತಾರಾಜ್ಯ
ಸಮನ್ವಯ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಆರ್. ಸೂರ್ಯನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಪೆರುಮುಂಡ, ಪ್ರಧಾನ ಸಂಯೋಜಕರಾಗಿ ಎ.ರಾಧಾಕೃಷ್ಣ ಗೌಡ ಕಲ್ಲಪಳ್ಳಿ, ಕೋಶಾಧಿಕಾರಿಯಾಗಿ ಶಾಂತಾ ರಾಮ್ ಭಟ್ ಕಮ್ಮಾಡಿ, ಉಪಾಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ಅರುಣ್ ರಂಗತ್ತಮಲೆ, ಬಿ.ಅನಿಲ್ ಕುಮಾರ್, ಸತ್ಯಕುಮಾರ್ ಅಡಿಂಜ ಅವರನ್ನು ಆಯ್ಕೆ ಮಾಡಲಾಯಿತು. 61 ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಯಿತು.





