ಭುವನೇಶ್ವರ: ಲೆಬನಾನ್ ತಂಡವನ್ನು 2–0 ಗೋಲುಗಳಿಂದ ಮಣಿಸಿದ ಭಾರತ ತಂಡ, ಇಂಟರ್ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯನ್ನು ಗೆದ್ದುಕೊಂಡಿತು. ಭಾನುವಾರ ರಾತ್ರಿ ಕ ನಡೆದ ಫೈನಲ್ನಲ್ಲಿ ಗೋಲು ಗಳಿಸಿದ ನಾಯಕ ಸುನಿಲ್ ಚೆಟ್ರಿ (46ನೇ ನಿ.) ಮತ್ತು ಲಾಲ್ಲಿಯಾನ್ಜುವಾಲ ಚಾಂಗ್ಟೆ 66ನೇ ನಿ.) ಅವರು ಆತಿಥೇಯ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.
ನಾಲ್ಕು ರಾಷ್ಟ್ರಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಅಜೇಯ
ಸಾಧನೆಯೊಂದಿಗೆ ಭಾರತ ಕಿರೀಟ ಮುಡಿಗೇರಿಸಿಕೊಂಡಿದೆ. ಬೆಂಗಳೂರಿನಲ್ಲಿ ಬುಧವಾರ ಆರಂಭವಾಗಲಿರುವ ಸ್ಯಾಫ್ ಫುಟ್ಬಾಲ್ ಟೂರ್ನಿಗೆ ಮುನ್ನ ಅಗತ್ಯವಿದ್ದ ಆತ್ಮವಿಶ್ವಾಸವನ್ನು ಈ ಗೆಲುವು ಚೆಟ್ರಿ ಬಳಗಕ್ಕೆ ತಂದುಕೊಟ್ಟಿದೆ. ಇಂಟರ್ಕಾಂಟಿನೆಂಟಲ್ ಕಪ್ನಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಟ್ರೋಫಿ ಇದು. ಈ ಹಿಂದೆ 2018 ರಲ್ಲಿ ಚೊಚ್ಚಲ ಟೂರ್ನಿಯನ್ನು ಗೆದ್ದುಕೊಂಡಿತ್ತು. ಪಂದ್ಯದ ಮೊದಲ ಅವಧಿ ಗೋಲುರಹಿತವಾಗಿತ್ತು.
ಆದರೆ ಎರಡನೇ ಅವಧಿಯಲ್ಲಿ ಆತಿಥೇಯರು ಆಕ್ರಮಣಕಾರಿ ಆಟವಾಡಿ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿದರು. 46ನೇ ನಿಮಿಷದಲ್ಲಿ ನಿಖಿಲ್ ಪುಜಾರಿ ಅವರ ಪಾಸ್ನಿಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಚಾಂಗ್ಟೆ, ಎದುರಾಳಿ ಡಿಫೆಂಡರ್ಗಳನ್ನು ತಪ್ಪಿಸಿ ಚೆಟ್ರಿ ಅವರತ್ತ ಒದ್ದರು. ಲೆಬನಾನ್ ಗೋಲ್ಕೀಪರ್ ಅಲಿ ಸಬೇಹ್ ಅವರನ್ನು ತಪ್ಪಿಸಿದ ಭಾರತ ತಂಡದ ನಾಯಕ, ಚೆಂಡನ್ನು ಗುರಿ ಸೇರಿಸಿದರು.
ಇದಾದ 20 ನಿಮಿಷಗಳಲ್ಲಿ ಭಾರತ ಎರಡನೇ ಗೋಲು ಗಳಿಸಿತು. ನೊರೆಮ್ ಮಹೇಶ್ ಅವರು ಗೋಲುಪೋಸ್ಟ್ ಗುರಿಯಾಗಿಸಿ ಒದ್ದ ಚೆಂಡನ್ನು ಸಬೇಹ್ ತಡೆದರೂ, ಚೆಂಡನ್ನು ಹಿಡಿದಿಟ್ಟುಕೊಳ್ಳಲು ವಿಫಲರಾದರು. ರಿಬೌಂಡ್ ಆಗಿ ಬಂದ ಚೆಂಡನ್ನು ಅಲ್ಲೇ ಇದ್ದ ಚಾಂಗ್ಟೆ ಗುರಿ ಸೇರಿಸಿದರು.