ಸುಳ್ಯ:ಸುಳ್ಯ-ಕಾಸರಗೋಡು ಸಂಪರ್ಕ ಕಲ್ಪಿಸುವ ಚೆರ್ಕಳ-ಜಾಲ್ಸೂರು ಅಂತಾರಾಜ್ಯ ಹೆದ್ದಾರಿಯಲ್ಲಿ ಹೊಂಡಗಳು ನಿರ್ಮಾಣ ಆಗಿ ಸಂಚಾರ ದುಸ್ತರ ಆಗಿದ್ದ ಸ್ಥಳದಲ್ಲಿ ಜಲ್ಲಿ ಹಾಕಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಲಾಗಿದೆ. ರಸ್ತೆಯಲ್ಲಿ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಮುರೂರು ಎಂಬಲ್ಲಿ ಬೃಹದಾಕಾರದ ಹೊಂಡ ಗುಂಡಿಗಳು ನಿರ್ಮಾಣವಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿ
ಬಸ್ ಸೇರಿದಂತೆ ವಾಹನಗಳು ಬದಲಿ ರಸ್ತೆಯಲ್ಲಿ ಸಂಚಾರ ನಡೆಸಿದವು. ಇದೀಗ ರಸ್ತೆ ನಿರ್ವಹಣೆ ಮಾಡುವ ಕೇರಳ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ಸ್ಥಳದಲ್ಲಿ ಜಲ್ಲಿ ಹಾಕಿ ದುರಸ್ತಿ ಕಾರ್ಯ ನಡೆಸಲಾಗಿದೆ. ಜೆಸಿಬಿಯಲ್ಲಿ ಹೊಂಡದ ಕೆಸರು ತೆರವು ಮಾಡಿ ಜಲ್ಲಿ ಕಲ್ಲು ಹಾಕಿ ಸೆಟ್ ಮಾಡಲಾಗಿದೆ. ನೀರು ಹರಿದು ಹೋಗಲು ಕಣಿ ಮಾಡಿ ಕೊಡಲಾಗಿದೆ.
ಮುರೂರು ಎಂಬಲ್ಲಿ ರಸ್ತೆಯಲ್ಲಿ ಬೃಹತ್ ಹೊಂಡಗಳಾಗಿದ್ದು, ಕೆಸರು, ನೀರು ತುಂಬಿ ಸಂಪೂರ್ಣ ಎಕ್ಕುಟ್ಟಿ ಹೋಗಿ ರಸ್ತೆಯಲ್ಲಿ ನೀರು ಕೆಸರು ತುಂಬಿದ್ದು ವಾಹನಗಳು ಹೂತು ಹೋಗುವ ಸ್ಥಿತಿ ನಿರ್ಮಾಣ ಆಗಿತ್ತು. ಈ ಸ್ಥಳದಲ್ಲಿ ಲಾರಿ ಮತ್ತಿತರ ವಾಹನಗಳು ಕೆಸರಿನಲ್ಲಿ ಹೂತು ಹೋಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಇದರಿಂದಾಗಿ ನಿನ್ನೆಯಿಂದ ಸುಳ್ಯ-ಕಾಸರಗೋಡು ಮಾರ್ಗದಲ್ಲಿ ಪ್ರಯಾಣಿಸುವ ಬಸ್ಸು ಸೇರಿದಂತೆ ವಾಹನಗಳು ಬದಲಿ ರಸ್ತೆಯಲ್ಲಿ ಪ್ರಯಾಣ ನಡೆಸುತ್ತಿದ್ದವು.