ಸುಳ್ಯ: ಸುಳ್ಯ ಮತ್ತು ಕಾಂಞಂಗಾಡ್ ಮಧ್ಯೆ ಅಂತಾರಾಜ್ಯ ಮಾರ್ಗದಲ್ಲಿ ಮಂಜೂರಾದ ಕೇರಳ ರಸ್ತೆ ಸಾರಿಗೆ ಸಂಸ್ಥೆಯ 5 ಬಸ್ಗಳು ಕೂಡ ಕೂಡಲೇ ಸರ್ವೀಸ್ ಆರಂಭಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದ್ದು ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ. ಈ ಬೇಡಿಕೆ ಮುಂದಿರಿಸಿ ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ನೇತೃತ್ವದ ನಿಯೋಗ ಕೆಎಸ್ಆರ್ಟಿಸಿ ಕಾಸರಗೋಡು ಜಿಲ್ಲಾ ಟ್ರಾನ್ಸ್ಪೋರ್ಟ್ ಅಧಿಕಾರಿಯನ್ನು
ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸುಳ್ಯ-ಆಲೆಟ್ಟಿ-ಕಲ್ಲಪಳ್ಳಿ- ಪಾಣತ್ತೂರು-ಕಾಂಞಗಾಡ್ ಮಧ್ಯೆ 5 ಕೇರಳ ಕೆಎಸ್ಆರ್ಟಿಸಿ ಬಸ್ ಮಂಜೂರಾಗಿ ಸುಮಾರು 12 ವರ್ಷಗಳ ಹಿಂದೆ 5 ಬಸ್ಗಳ ಓಡಾಟ ಆರಂಭಿಸಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಬಸ್ ಸಂಪೂರ್ಣ ಸ್ಥಗಿತಗೊಂಡಿತ್ತು. ಬಳಿಕ ಬಸ್ ಆರಂಭವಾದರೂ ಪೂರ್ಣ ಪ್ರಮಾಣದಲ್ಲಿ ಬಸ್ ಓಡಾಟ ನಡೆಸುತ್ತಿಲ್ಲ. ಕಳೆದ ಒಂದು ವರ್ಷದಿಂದ ಕೇವಲ ಒಂದು ಬಸ್ ಮಾತ್ರ ಓಡಾಟ ನಡೆಸುತಿದೆ.
ಇದೀಗ ಅಂತಾರಾಜ್ಯ ರಸ್ತೆ ಸಂಪೂರ್ಣ ಅಭಿವೃದ್ಧಿ ಕಂಡಿದೆ. ಸಾಕಷ್ಟು ಮಂದಿ ಅಂತಾರಾಜ್ಯ ಪ್ರಯಾಣಿಕರು ಇದ್ದಾರೆ. ಆದುದರಿಂದ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಬಸ್ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಿಸಿ ಎಲ್ಲಾ 5 ಬಸ್ಗಳು ಓಡಾಟ ನಡೆಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ. ಮನವಿಗೆ ಸ್ಪಂಧಿಸಿದ ಅಧಿಕಾರಿಗಳು ಈಗ ಇರುವ 1 ಬಸ್ ಜೊತೆಗೆ ಇನ್ನೊಂದು ಬಸ್ ತಕ್ಷಣ ಆರಂಭಿಸುವುದಾಗಿ ತಿಳಿಸಿದ್ದಾರೆ. ಉಳಿದ 3 ಬಸ್ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಅರುಣ್ ರಂಗತ್ತಮಲೆ ತಿಳಿಸಿದ್ದಾರೆ. ಬಿನು ವರ್ಗೀಸ್, ಐಸಾಕ್ ಪಿ.ಎ, ಎಂ.ಟಿ.ಬಾಬಣ್ಣ ನಿಯೋಗದಲ್ಲಿ ಇದ್ದರು.