ಕೊಚ್ಚಿ : ಖ್ಯಾತ ಚಲನಚಿತ್ರ ನಟ ಹಾಗೂ ಮಾಜಿ ಚಾಲಕುಡಿ ಸಂಸದ ಇನ್ನಸೆಂಟ್ (75) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಲಯಾಳಂ ಚಲನಚಿತ್ರ ನಟರ ಸಂಘ‘ಅಮ್ಮ’ದ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಹಾಸ್ಯನಟ, ಪೋಷಕ ನಟ ಮತ್ತು ವಿಶಿಷ್ಟ ಪಾತ್ರಗಳಲ್ಲಿ ಮಿಂಚಿದ್ದ ಇನ್ನಸೆಂಟ್ ಅವರು
ಮಲಯಾಳಂ,ತಮಿಳು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ 760 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಅತ್ಯುತ್ತಮ ಪೋಷಕ ನಟ (ಮಯವಿಲ್ಕಾವಾಡಿ) ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು. ತನ್ನ ಶ್ರೇಷ್ಠ ಮತ್ತು ಸ್ವಾಭಾವಿಕ ನಟನೆ ಮತ್ತು ಹಾಸ್ಯದಿಂದ ಪ್ರೇಕ್ಷಕರ ಮನದಲ್ಲಿ ಚಿರಸ್ಥಾಯಿಯಾಗಿದ್ದ ಅವರು ಚಲನಚಿತ್ರ ನಿರ್ಮಾಪಕ, ಉದ್ಯಮಿ ಮತ್ತು ಇರಿಂಗಾಲಕುಡ ನಗರಸಭಾ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. 1948ರ ಫೆಬ್ರವರಿ 28ರಂದು ತ್ರಿಶೂರ್ ಜಿಲ್ಲೆಯ ಇರಿಂಗಾಲಕುಡದಲ್ಲಿ ಇನ್ನಸೆಂಟ್ ಜನಿಸಿದರು. ಅವರು ಲಿಟ್ಲ್ಫ್ಲವರ್ ಕಾನ್ವೆಂಟ್ ಹೈಸ್ಕೂಲ್, ನ್ಯಾಷನಲ್ ಹೈಸ್ಕೂಲ್ ಮತ್ತು ಡಾನ್ ಬಾಸ್ಕೋ ಎಸ್ಎನ್ಹೆಚ್ ಶಾಲೆಯಲ್ಲಿ ಶಿಕ್ಷಣ ಪಡೆದರು. 8ನೇ ತರಗತಿಯಲ್ಲಿ ವ್ಯಾಸಂಗ ಮುಗಿಸಿ ಕೆಲಕಾಲ ವ್ಯಾಪಾರಿಯಾಗಿ, ಉದ್ಯಮಿಯಾಗಿದ್ದರು.ಇದೇ ವೇಳೆ ನಾಟಕಗಳಲ್ಲಿ ಅಭಿನಯಿಸಿದರು. 1979ರಲ್ಲಿ ಇರಿಂಗಾಲಕುಡ ಪುರಸಭೆಯಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾದರು.
1972 ರಲ್ಲಿ, ಎಬಿ ರಾಜ್ ನಿರ್ದೇಶನದ “ನೃತಶಾಲಾ’ ಇನ್ನಸೆಂಟ್ ಅವರ ಮೊದಲ ಚಿತ್ರ. ಮಲಯಾಳಂನ ಪ್ರಮುಖ ನಿರ್ದೇಶಕರ ಚಿತ್ರಗಳಲ್ಲಿ ಇನ್ನಸೆಂಟ್ ನಟಿಸಿದ್ದಾರೆ. ಸಿದ್ದಿಕ್ ಲಾಲ್ ನಿರ್ದೇಶನದ ರಾಮ್ಜಿ ರಾವ್ ಸ್ಪೀಕಿಂಗ್ ಅವರ ವೃತ್ತಿಜೀವನದ ಮಹತ್ವದ ತಿರುವು ನೀಡಿದ ಚಿತ್ರ. ಅದರೊಂದಿಗೆ ಅವರು ಮಲಯಾಳಂನ ಪ್ರಮುಖ ಹಾಸ್ಯನಟರಾದರು. ಗಾಡ್ ಫಾದರ್,ವಿಯೆಟ್ನಾಂ ಕಾಲೋನಿ, ಕಾಬುಲಿವಾಲಾ, ಮನ್ನಾರ್ ಮಥಾಯಿ ಸ್ಪೀಕಿಂಗ್, ಮವಿಲ್ಕಾವಾಡಿ, ಚಂದ್ರಲೇಖಾ, ಮನಸಿನಕರೆ, ದೇವಾಸುರಂ, ಡಾ.ಪಶುಪತಿ, ಪಿನ್ಗಾಮಿ, ರಾವಣ ಪ್ರಭು ಮುಂತಾದ ಚಿತ್ರಗಳಲ್ಲಿ ಅವರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಚಾಲಕುಡಿಯಿಂದ ಎಡ ಪಕ್ಷೇತರರಾಗಿ ಆಯ್ಕೆಯಾದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಅದನ್ನು ನಗುಮುಖದಿಂದ ಎದುರಿಸಿದ ಇನ್ನಸೆಂಟ್ ಹಲವರಿಗೆ ಸ್ಫೂರ್ತಿಯಾಗಿದ್ದರು. ನಗುವಿನ ಹಿಂದೆ (ಆತ್ಮಕಥೆ), ಕ್ಯಾನ್ಸರ್ ವಾರ್ಡ್ನಲ್ಲಿ ನಗು ಸೇರಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.