ಸುಳ್ಯ:ಗಾಂಧಿ ಚಿಂತನ ವೇದಿಕೆಯ ನೇತೃತ್ವದಲ್ಲಿ
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15ರಂದು ಸುಳ್ಯ ನಗರದಲ್ಲಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ನಡೆಯಿತು. ಸುಳ್ಯ ನಗರದ ಮತ್ತು ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವ ದೊಂದಿಗೆ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಳ್ಯ ನಗರದ ವಿವಿಧ
ವಾರ್ಡ್ಗಳಿಂದ ಆಗಮಿಸಿದ ಜನರು ಜ್ಯೋತಿ ಸರ್ಕಲ್, ವಿಷ್ಣು ಸರ್ಕಲ್ ಹಾಗೂ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಗಾಂಧಿನಡಿಗೆ ಏಕ ಕಾಲಕ್ಕೆ ಹೊರಟಿತು. 3 ಕಡೆಯಿಂದ ಆಗಮಿಸಿದ ‘ಸ್ವಾತಂತ್ರ್ಯ ನಡಿಗೆ’ ಬಸ್ ನಿಲ್ದಾಣದಲ್ಲಿ ಸಂಗಮಿಸಿತು. ಅಲ್ಲಿ ಗಾಯಕರಾದ ಕೆ.ಆರ್.ಗೋಪಾಲಕೃಷ್ಣ, ಆರತಿ ಪುರುಷೋತ್ತಮ ಅವರಿಂದ ಸ್ವಾತಂತ್ರ್ಯ ಗೀತೆ ಗಾಯನ ನಡೆಯಿತು. ಬಳಿಕ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ಸಂಕಲ್ಪ ಕೈಗೊಳ್ಳಲಾಯಿತು.
ಶಾಸಕಿ ಭಾಗೀರಥಿ ಮುರುಳ್ಯ, ತಹಶೀಲ್ದಾರ್ ಜಿ.ಮಂಜುನಾಥ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಹಿರಿಯ ಪತ್ರಕರ್ತ ಡಾ.ಯು.ಪಿ.ಶಿವಾನಂದ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು. ಗಾಂಧಿಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಚಾಲಕರಾದ ದಿನೇಶ್ ಮಡಪ್ಪಾಡಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನಪ್ರತಿನಿಧಿಗಳು ಹಾಗೂ ಪ್ರಮುಖರು ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸಿದ್ದರು.