ಬೆಂಗಳೂರು: ಮಳೆಯಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಅಡಚಣೆಯಾಗಿದೆ. ಇದರಿಂದಾಗಿ ಟಾಸ್ ಕಾಣದೇ ಮೊದಲ ದಿನದಾಟ ರದ್ದುಗೊಂಡಿದೆ. ಇಂದು ಬೆಳಿಗ್ಗೆಯಿಂದಲೇ ಉದ್ಯಾನನಗರಿಯಲ್ಲಿ ಮಳೆ ಸುರಿಯುತ್ತಿದೆ. ಸತತವಾಗಿ ಸುರಿದ
ಮಳೆಯಿಂದಾಗಿ ಊಟದ ವಿರಾಮವನ್ನು ಬೇಗನೇ ತೆಗೆದುಕೊಳ್ಳಲಾಯಿತು. ಟೀ ವಿರಾಮದವರೆಗೂ ಪರಿಸ್ಥಿತಿ ಬದಲಾಗಲಿಲ್ಲ. ಬಳಿಕ ಮೋಡಕವಿದ ವಾತಾವಾರಣ ಹಾಗೂ ತುಂತುರು ಮಳೆ ಮುಂದುವರಿದ ಹಿನ್ನೆಲೆಯಲ್ಲಿ ದಿನದಾಟ ರದ್ದುಗೊಳಿಸಲು ಅಂಪೈರ್ಗಳು ನಿರ್ಧರಿಸಿದ್ದಾರೆ.ಇದರಿಂದಾಗಿ ಟಾಸ್ ಕೂಡ ಕಾಣದೇ ಮೊದಲ ದಿನದಾಟ ಸಂಪೂರ್ಣವಾಗಿ ನಷ್ಟವಾಗಿದೆ.
ಬೆಂಗಳೂರಿನಲ್ಲಿ ಇನ್ನೂ ಎರಡು, ಮೂರು ದಿವಸ ಇದೇ ವಾತಾವರಣ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಚಿನ್ನಸ್ವಾಮಿ ಅಂಗಳದಲ್ಲಿ ಸಬ್ ಏರ್ ಸಿಸ್ಟಮ್ ಎಂಬ ಅತ್ಯಾಧುನಿಕ ವ್ಯವಸ್ಥೆ ಇದೆ. ಮಳೆ ಬಂದು ನಿಂತ ಅರ್ಧ ಗಂಟೆಯಲ್ಲಿ ಪಂದ್ಯವಾಡಲು ಮೈದಾನವನ್ನು ಸಿದ್ಧಗೊಳಿಸುವ ನುರಿತ ಸಿಬ್ಬಂದಿಯೂ ಇದ್ದಾರೆ. ಆದರೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಿನ್ನಡೆಯಾಗಿದೆ. ಗುರುವಾರ ಮಳೆಯಾಗದಿದ್ದರೆ ಹಾಗೂ ಶುಭ್ರವಾದ ವಾತಾವಾರಣ ಕಂಡುಬಂದರೆ ಬೆಳಿಗ್ಗೆ 8.45ಕ್ಕೆ ಟಾಸ್ ಗದಿಪಡಿಸಲಾಗಿದೆ. ಪಂದ್ಯ 9.15ಕ್ಕೆ ಆರಂಭವಾಗಲಿದೆ.