ನವದೆಹಲಿ:ಟಿ20 ವಿಶ್ವಕಪ್ನ ತನ್ನ ಎರಡನೇ ಪಂದ್ಯದಲ್ಲಿ
ಭಾರತ ತಂಡವು ಗುರುವಾರ ನಮಿಬಿಯಾ ವಿರುದ್ಧ ಆಡಲಿದೆ. ಅಭಿಷೇಕ್ ಶರ್ಮಾ ಅವರ ಅನಾರೋಗ್ಯ ತಂಡದಲ್ಲಿ ಸ್ವಲ್ಪ ಆತಂಕ ತಂದಿದೆ. ಸ್ಫೋಟಕ ಶೈಲಿಯ ಬ್ಯಾಟರ್ ಅಭಿಷೇಕ್ ಅವರು ಎರಡು ದಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದ ನಂತರ ಬುಧವಾರ ತಂಡಕ್ಕೆ ಮರಳಿದ್ದಾರೆ. ಅವರು ನಮಿಬಿಯಾ ಎದುರು
ಕಣಕ್ಕಿಳಿಯುವ ಕುರಿತು ಪಂದ್ಯದ ಆರಂಭಕ್ಕೂ ಮುನ್ನ ನಿರ್ಧರಿಸಲಾಗುವುದು ಎಂದು ಭಾರತ ತಂಡದ ಬ್ಯಾಟರ್ ತಿಲಕ್ ವರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೆರಿಕ ಎದುರು ಸೂರ್ಯ ಏಕಾಂಗಿ ಹೋರಾಟದಿಂದಾಗಿ ಗೆಲುವು ಸಾಧ್ಯವಾಗಿತ್ತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಭಿಷೇಕ್ ಆಡದಿದ್ದರೆ ಸಂಜು ಸ್ಯಾಮ್ಸನ್ ಸ್ಥಾನ ಪಡೆಯುವುದು ಖಚಿತ. ಇದೇ 15ರಂದು ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಶರ್ಮಾ ಫಿಟ್ ಆಗಿ ಬರುವ ನಿರೀಕ್ಷೆ ಇದೆ. ಹಾಲಿ ಚಾಂಪಿಯನ್ ಆಗಿರುವ ಆತಿಥೇಯ ಭಾರತ ತಂಡವನ್ನು ಎದುರಿ ಸುವುದು ಜೆರಾರ್ಡ್ ಎರಸ್ಮಸ್ ನೇತೃತ್ವದ ನಮೀಬಿಯಾ ತಂಡಕ್ಕೆ ಸುಲಭವಲ್ಲ. ಅದರಲ್ಲೂ ಭಾರತದ ಬಲಿಷ್ಠ ಬ್ಯಾಟಿಂಗ್, ಬೌಲಿಂಗ್ ಪಡೆಯನ್ನು ಎದುರಿಸುವುದು ಕಠಿಣ ಪರೀಕ್ಷೆಯಾಗಬಹುದು.
ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ ಒಂದು ಪಂದ್ಯ ಆಡಿವೆ. ಭಾರತ ತಂಡವು ಅಮೆರಿಕ ವಿರುದ್ಧ ಜಯಿಸಿದೆ. ಆದರೆ ನಮಿಬಿಯಾ ನೆದರ್ಲೆಂಡ್ಸ್ ವಿರುದ್ಧ ಪರಾಭವಗೊಂಡಿತ್ತು. ದೆಹಲಿಯಲ್ಲಿ ರಾತ್ರಿಯ ಹೊತ್ತು ಇಬ್ಬನಿ ಸುರಿಯುವ ನಿರೀಕ್ಷೆ ಇದೆ. ಆದ್ದರಿಂದ ಟಾಸ್ ಗೆದ್ದವರು ಮೊದಲು ಬೌಲಿಂಗ್ ಮಾಡುವ ಸಾಧ್ಯತೆಯೇ ಹೆಚ್ಚು.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ , ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ಇಶಾನ್ ಕಿಶನ್ (ವಿಕೆಟ್ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರಿಂಕು ಸಿಂಗ್.
ನಮಿಬಿಯಾ: ಜೆರಾರ್ಡ್ ಎರಸ್ಮಸ್ (ನಾಯಕ), ಜ್ಯಾನ್ ಬಾಲ್ಟ್, ಝೇನ್ ಗ್ರೀನ್ (ವಿಕೆಟ್ಕೀಪರ್), ಮಲಾನ್ ಕ್ರುಗರ್, ಡೈಲನ್ ಲೀಚೆರ, ಲಾರೆನ್ ಸ್ಟೀನ್ಕ್ಯಾಂಪ್, ಜಾನ್ ಫ್ರೈಲಿಂಕ್, ಜಾನ್ ನಿಕೊಲ್, ಲಾಫ್ಟಿ ಈಟನ್, ವಿಲಿಯಮ್ ಮೈಬರ್ಗ್, ಜೆ.ಜೆ. ಸ್ಮಿತ್, ಜಾಕ್ ಬ್ರಸೆಲ್, ಮ್ಯಾಕ್ಸ್ ಹಿಂಗೊ, ಬೆನಾಡ್ ಶೋಲ್ಜ್, ಬೆನ್ ಶಿಕಾಂಗೊ, ರುಬೆನ್ ಟ್ರಂಪಲ್ಮ್ಯಾನ್.
ಪಂದ್ಯ ಆರಂಭ: ರಾತ್ರಿ 7ರಿಂದ







