ಚೆನ್ನೈ: ಸೂಪರ್ ಎಂಟರ ತಮ್ಮ ಎರಡನೇ ಪಂದ್ಯದಲ್ಲಿ ಭಾರತ ಇಂದು ಜಿಂಬಾಬ್ವೆ ವಿರುದ್ಧ ಆಡಲಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋತಿದ್ದು ಮತ್ತು ಅಗ್ರಕ್ರಮಾಂಕದ ಬ್ಯಾಟರ್ಗಳ ಅಸ್ಥಿರತೆಗಳು ತಂಡದ ಚಿಂತೆಗೆ ಕಾರಣವಾಗಿವೆ. ಸೂಪರ್ ಎಂಟರ ಹಂತದಲ್ಲಿ ಇನ್ನುಳಿದ ಎರಡೂ ಪಂದ್ಯಗಳನ್ನು
ಗೆದ್ದರೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವು ಆತಿಥೇಯ ತಂಡಕ್ಕೆ ಜೀವಂತವಾಗುಳಿಯಲಿದೆ. ಎರಡರಲ್ಲಿ ಒಂದು ಸೋತರೂ ನಿರ್ಗಮನ ಖಚಿತ. ಆದ್ದರಿಂದ ಗುರುವಾರ ಇಲ್ಲಿ ನಡೆಯಲಿರುವ ಜಿಂಬಾಬ್ವೆ ಮತ್ತು ಮಾರ್ಚ್ 1ರಂದು ಆಯೋಜಿಸಲಾಗಿರುವ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಗೆಲ್ಲಬೇಕಿದೆ. ದಕ್ಷಿಣ ಆಫ್ರಿಕಾ ಎದುರು 76 ರನ್ಗಳ ಅಂತರದಿಂದ ಸೋತಿದ್ದು ಬ್ಯಾಟಿಂಗ್ ಲೋಪಗಳಿಂದಾಗಿಯೇ ಎಂಬುದು ಸ್ಪಷ್ಟ.ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರು ಮಧ್ಯಮ ಕ್ರಮಾಂಕದಲ್ಲಿ ಮುಕ್ತವಾಗಿ
ಬ್ಯಾಟ್ ಬೀಸಲು ಅಗ್ರಬ್ಯಾಟರ್ಗಳು ಉತ್ತಮ ಆರಂಭ ನೀಡಬೇಕು. ಆಗ ದೊಡ್ಡ ಮೊತ್ತ ಗಳಿಸಲು ಅಥವಾ ಚೇಸ್ ಮಾಡಲು ಹೆಚ್ಚು ಅನುಕೂಲ.ಜಸ್ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಸ್ಪಿನ್ನರ್ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಹಾರ್ದಿಕ್ ಹಾಗೂ ಶಿವಂ ಅವರು ಉತ್ತಮ ಲಯದಲ್ಲಿದ್ದಾರೆ. ಅಲ್ಲದೇ ಈ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರ ಬದಲು ಅಕ್ಷರ್ ಪಟೇಲ್ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಉಪನಾಯಕ ಅಕ್ಷರ್ ಅವರನ್ನು ಕಳೆದ ಪಂದ್ಯದಲ್ಲಿ ಆಡಿಸಿರಲಿಲ್ಲ. ಚೆಪಾಕ್ನಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ
ಜಿಂಬಾಬ್ವೆಯ ಪ್ರಮುಖ ಬ್ಯಾಟರ್ಗಳಾದ ಬ್ರಯನ್ ಬೆನೆಟ್, ತಡಿವಾನಶೇ ಮರುಮನಿ, ರಿಯಾನ್ ಬರ್ಲ್ ಮತ್ತು ಆಲ್ರೌಂಡರ್ ಸಿಕಂದರ್ ರಝಾ ಅವರನ್ನು ನಿಯಂತ್ರಿಸುವುದು ಆತಿಥೇಯ ಬೌಲರ್ಗಳಿಗೆ ಪ್ರಮುಖ ಸವಾಲಾಗಲಿದೆ. ಜಿಂಬಾಬ್ವೆ ಬೌಲಿಂಗ್ ಪಡೆಯಲ್ಲಿರುವ ಬ್ಲೆಸಿಂಗ್ ಮುಝರಬಾನಿ, ಬ್ರಾಡ್ ಇವಾನ್ಸ್ ಹಾಗೂ ಡಿಯಾನ್ ಮೈಯರ್ಸ್ ಅವರು ಪರಿಣಾಮಕಾರಿ ದಾಳಿ ಮಾಡುವ ಸಮರ್ಥರಾಗಿದ್ದಾರೆ.
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ ತಿಲಕ್ ವರ್ಮಾ ಸಂಜು ಸ್ಯಾಮ್ಸನ್ ಶಿವಂ ದುಬೆ ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯ ಅರ್ಷದೀಪ್ ಸಿಂಗ್ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ವರುಣ್ ಚಕ್ರವರ್ತಿ ಕುಲದೀಪ್ ಯಾದವ್ ಅಕ್ಷರ್ ಪಟೇಲ್ ವಾಷಿಂಗ್ಟನ್ ಸುಂದರ್.
ಜಿಂಬಾಬ್ವೆ: ಸಿಕಂದರ್ ರಝಾ (ನಾಯಕ) ಬ್ರಯನ್ ಬೆನೆಟ್ ರಿಯಾನ್ ಬರ್ಲ್ ಗ್ರೆಮ್ ಕ್ರಿಮರ್ ಬ್ರಾಡ್ಲಿ ಇವಾನ್ಸ್ ಕ್ಲೈವ್ ಮದಾಂದೆ ಟಿನೊಟೆಂದಾ ಮಪೊಸಾ ಟ್ಯಾಡಿವನಾಶೆ ಮರುಮಣಿ ವೆಲ್ಲಿಂಗ್ಟನ್ ಮಸಕಜಾ ಟೋನಿ ಮುನಿಯೊಂಗಾ ತಶಿಂಗಾ ಮುಸೆಕಿವಾ ಬ್ಲೆಸಿಂಗ್ ಮುಝರಬಾನಿ ಡಿಯಾನ್ ಮೈಯರ್ಸ್ ರಿಚರ್ಡ್ ಎನ್ಗರಾವಾ ಬೆನ್ ಕರನ್.
ಪಂದ್ಯ ಆರಂಭ: ರಾತ್ರಿ 7
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಜಿಯೊಹಾಟ್ಸ್ಟಾರ್ ಆ್ಯಪ್









