ಪುಣೆ: ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 15 ರನ್ಗಳ ಅಂತರದಲ್ಲಿ ಜಯ ಸಾಧಿಸಿದೆ. ಈ ಮೂಲಕ ಟಿ20 ಸರಣಿ ಗೆದ್ದು ಕೊಂಡಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು 9 ವಿಕೆಟ್ಗಳ ನಷ್ಟಕ್ಕೆ 181 ರನ್ ಕಲೆ ಹಾಕಿತ್ತು. ಇದನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 166 ರನ್ ಗಳಿಸಿ ಆಲ್ ಔಟ್ ಆಯಿತು. ಆ ಮೂಲಕ 15 ರನ್ಗಳ ಅಂತರದಲ್ಲಿ ಸೋಲು ಅನುಭವಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ
ಆರಂಭದಲ್ಲೇ ಆಘಾತ ಕಾದಿತ್ತು. ಈ ಬಾರಿಯೂ ಆರಂಭಿಕ ಬ್ಯಾಟರ್ ಸಂಜು ಸಾಮ್ಸನ್ ವಿಫಲರಾದರು. ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು. ತಿಲಕ್ ವರ್ಮಾ, ನಾಯಕ ಸೂರ್ಯಕುಮಾರ್ ಯಾದವ್ ಸೊನ್ನೆ ಸುತ್ತಿದರು.
ಮತ್ತೊಬ್ಬ ಆರಂಭಿಕ ಅಭಿಷೇಕ್ ಶರ್ಮಾ 29 ರನ್ ಬಾರಿಸಿದರು. ಭರವಸೆಯ ಆಟವಾಡುತ್ತಿದ್ದ ರಿಂಕು 30 ರನ್ಗೆ ಔಟಾದರು. ಆರನೇ ವಿಕೆಟ್ಗೆ ಜೊತೆಯಾದ ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದರು. ಉಭಯ ಆಟಗಾರರು ಅರ್ಧ ಶಕತ ಬಾರಿಸಿದರು.
ಶಿವಂ ದುಬೆ 34 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 53 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 53 ರನ್ ಸಿಡಿಸಿದರು.
ಇಂಗ್ಲೆಂಡ್ ಪರ ಶಕೀಬ್ ಮೊಹಮ್ಮದ್ 3, ಜೆಮಿ ಓವರ್ಟನ್ 2 ಹಾಗೂ ಆದಿಲ್ ರಶೀದ್, ಬ್ರೈಡನ್ ಕಾರ್ಸ್ ತಲಾ ಒಂದು ವಿಕೆಟ್ ಕಿತ್ತರು.
ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ 26 ಎಸೆತಗಳಲ್ಲಿ ಬಿರುಸಿನ 51 ರನ್ ಸಿಡಿಸಿದರು. ಭಾರತದ ಪರ ಹರ್ಷಿತ್ ರಾಣಾ ಹಾಗೂ ರವಿ ಬಿಷ್ಣೋಯ್ ತಲಾ 3 ವಿಕೆಟ್ ಕಿತ್ತರು.