ಇಸ್ಲಾಮಾಬಾದ್: ಇದೇ 15ರಂದು ಭಾರತದ ವಿರುದ್ಧ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಣಕ್ಕಿಳಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ. ಇದರೊಂದಿಗೆ ಟಿ20 ವಿಶ್ವಕಪ್ನಲ್ಲಿ ಫೆ.15ರಂದು ಭಾರತ ಮತ್ತು ಪಾಕಿಸ್ಥಾನ ಮಧ್ಯೆ ಹೈವೋಲ್ಟೇಜ್ ಪಂದ್ಯ ಕೊಲಂಬೋದಲ್ಲಿ ನಡೆಯಲಿದೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶದವರು ಕ್ರಿಕೆಟ್ ಆಡಲು ಒಪ್ಪಿಸಿದ ನಂತರ
ಪಾಕ್ ಸರ್ಕಾರದಿಂದ ಈ ನಿರ್ಧಾರ ಹೊರಬಿದ್ದಿದೆ. ಸ್ನೇಹಪರ ರಾಷ್ಟ್ರಗಳ ಕೋರಿಕೆಯ ಮೇರೆಗೆ ಪಾಕ್ ತಂಡಕ್ಕೆ ಭಾರತದ ವಿರುದ್ಧ ಆಡಲು ಅನುಮತಿ ನೀಡಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಆಟದ ಹಿತದೃಷ್ಟಿಯಿಂದ ಬಹಿಷ್ಕಾರ ನಿರ್ಧಾರ ದಿಂದ ಹಿಂದೆ ಸರಿಯುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮುಖ್ಯಸ್ಥ ಅಮಿನುಲ್ ಇಸ್ಲಾಂ ಅವರು ಪಾಕಿಸ್ತಾನಕ್ಕೆ ಮನವಿ ಮಾಡಿದ್ದರು.ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರೂ ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಅವರಿಗೆ ಕರೆ ಮಾಡಿ ಬಹಿಷ್ಕಾರದ ಕರೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಪಾಕ್ ಸರ್ಕಾರದ ನಿರ್ಧಾರ ಕೈಗೊಂಡಿದೆ.
ಈ ಬೆಳವಣಿಗೆಯಿಂದಾಗಿ ಭಾರತ-ಪಾಕಿಸ್ತಾನ ನಡುವಿನ ಎ ಗುಂಪಿನ ಪಂದ್ಯವು ಕೊಲಂಬೊದಲ್ಲಿ ನಿಗದಿಯಂತೆ ನಡೆಯಲಿದೆ. ಮಾತುಕತೆಯ ವೇಳೆ ಪಾಕಿಸ್ತಾನ ಕೆಲವು ಬೇಡಿಕೆಗಳನ್ನು ಐಸಿಸಿ ಮುಂದಿಟ್ಟಿದ್ದರು ಎನ್ನಲಾಗಿದೆ ಈ ಪ್ರಸ್ತಾವವನ್ನು ಐಸಿಸಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.ಬಾಂಗ್ಲಾದೇಶ ತಂಡವನ್ನು ವಿಶ್ವಕಪ್ನಿಂದ ಹೊರಗಿಟ್ಟ ಐಸಿಸಿ ಕ್ರಮವನ್ನು ಪಾಕಿಸ್ತಾನ ವಿರೋಧಿಸಿತ್ತು. ಬಾಂಗ್ಲಾಕ್ಕೆ ಬೆಂಬಲ ಸೂಚಿಸಿ ಭಾರತ ವಿರುದ್ಧ ಪಂದ್ಯಕ್ಕೆ ಪಾಕಿಸ್ತಾನ ಬಹಿಷ್ಕಾರ ಹಾಕಿತ್ತು.







