ಪುಣೆ:ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಅ.19ರಂದು ಭಾರತ ತನ್ನ ನಾಲ್ಕನೆ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು , ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿತು. ಈ ಮೂರು ಪಂದ್ಯಗಳಲ್ಲಿಯೂ ಟೀಂ ಇಂಡಿಯಾ
ಏಕಪಕ್ಷೀಯ ಜಯ ಸಾಧಿಸಿತ್ತು. ಇದೀಗ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಸೆಮಿಫೈನಲ್ ಹಾದಿ ಇನ್ನಷ್ಟು ಸುಲಭವಾಗಲಿದೆ. ಈ ಪಂದ್ಯದಲ್ಲಿ ಮೀಸಲು ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಮೊದಲ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾ ತನ್ನ ಅತ್ಯುತ್ತಮ ಆಡುವ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ರೋಹಿತ್, ತಂಡದ ಉಳಿದ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ.
ಈ ಪಂದ್ಯದಲ್ಲಿ ರೋಹಿತ್ ತಮ್ಮ ತಂಡದಲ್ಲಿ ಎರಡು ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಮೊಹಮ್ಮದ್ ಶಮಿ ಈ ವಿಶ್ವಕಪ್ನಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಪುಣೆಯಲ್ಲಿ
ಬಾಂಗ್ಲಾದೇಶ ವಿರುದ್ಧ ಅವರಿಗೆ ಅವಕಾಶ ಸಿಗಬಹುದು. ಶಾರ್ದೂಲ್ ಠಾಕೂರ್ ಬದಲಿಗೆ ಅವರು ತಂಡಕ್ಕೆ ಆಯ್ಕೆಯಾಗಬಹುದು.
ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಬದಲಿಗೆ ಸೂರ್ಯಕುಮಾರ್ ಯಾದವ್ಗೆ ಬ್ಯಾಟಿಂಗ್ನಲ್ಲಿ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗುತಿದೆ. ಪಾಕಿಸ್ತಾನ ವಿರುದ್ಧದ ಕೊನೆಯ ಪಂದ್ಯದಲ್ಲಿ ಅಯ್ಯರ್ ಅರ್ಧಶತಕ ಗಳಿಸಿದ್ದರು. ಅದಾಗ್ಯೂ ಶ್ರೇಯಸ್ಗೆ ವಿಶ್ರಾಂತಿ ನೀಡಿ, ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಅವರನ್ನು ಪ್ಲೇಯಿಂಗ್ 11 ರಲ್ಲಿ ಕಣಕ್ಕಿಳಿಸಬಹುದಾ ಎಂಬ ಕುತೂಹಲ ಇದೆ. ಬಾಂಗ್ಲಾದೇಶ ತಂಡ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೆಚ್ಚು ಪ್ರಯೋಗಗಳನ್ನು ಮಾಡುವ ಗೋಜಿಗೆ ಹೋಗುವುದಿಲ್ಲ. ಆದರೆ ಬೆಂಚ್ ಬಲಕ್ಕೆ ಅವಕಾಶ ನೀಡಲು ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ ಎಂಬ ಸೂಚನೆಯಿದೆ.