ಹಾಂಗ್ಝೌ: ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, 3,000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಸಾಬ್ಲೆ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದಾರೆ. ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಅವಿನಾಶ್ ಸಾಬ್ಲೆ ಪಾತ್ರರಾಗಿದ್ದಾರೆ. 8 ನಿಮಿಷ 19 ಸೆಕೆಂಡ್ 54 ಕ್ಷಣಗಳಲ್ಲಿ 3,000 ಮೀಟರ್ ಓಟ ಪೂರ್ಣಗೊಳಿಸಿದ
ಅವಿನಾಶ್ ಮೊದಲ ಸ್ಥಾನ ಪಡೆದರು. ಗುಂಡು ಎಸೆತದಲ್ಲಿ ತಜಿಂದರ್ಪಾಲ್ ಸಿಂಗ್ ತೂರ್ 20.36 ಮೀ ದೂರ ಎಸೆದು 13ನೇ ಚಿನ್ನ ಗೆದ್ದರು.ಭಾರತದ ಅಥ್ಲೀಟ್ ತಜಿಂದರ್ಪಾಲ್ ಸಿಂಗ್ ತೂರ್ 7.26 ಕೆಜಿ ಕಬ್ಬಿಣದ ಗುಂಡನ್ನು 20.36 ಮೀ ದೂರಕ್ಕೆಸೆದು ಸತತ ಎರಡನೇ ಏಷ್ಯಾಡ್ ಚಿನ್ನದ ಪದಕ ಗೆದ್ದರು.
ಭಾರತ ಇದುವರೆಗೆ 13 ಚಿನ್ನ, 21 ಬೆಳ್ಳಿ ಹಾಗೂ 19 ಕಂಚಿನ ಪದಕಗಳೊಂದಿಗೆ ಒಟ್ಟು 53 ಪದಕ ಗಳಿಸಿದೆ.
ಏಷ್ಯನ್ ಗೇಮ್ಸ್ನಲ್ಲಿ ಇಂದು ಮಹಿಳೆಯರ 1,500 ಮೀಟರ್ ಓಟದಲ್ಲಿ ಹರ್ಮಿಲನ್ ಬೇನ್ಸ್ ಬೆಳ್ಳಿ ಗೆದ್ದರೆ, ಪುರುಷರ 1,500 ಮೀ ಓಟದಲ್ಲಿ ಅಜಯ್ ಕುಮಾರ್ ಸರೋಜ್ ಮತ್ತು ಜಿನ್ಸನ್ ಜಾನ್ಸನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಬೇನ್ಸ್ 4:12.74 ಸೆಕೆಂಡ್ಗಳಲ್ಲಿ ಓಟ ಪೂರ್ಣಗೊಳಿಸಿದರೆ, ಸರೋಜ್ 3:38.94 ಮತ್ತು ಜಾನ್ಸನ್ 3:39.74 ಸೆಕೆಂಡ್ನಲ್ಲಿ ಓಟ ಮುಗಿಸಿ ಪದಕ ಗೆದ್ದರು.ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಅವರು 8.19 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.
ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ಭಾರತದ ಸೀಮಾ ಪುನಿಯಾ 58.62 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದರು.
ಮಹಿಳೆಯರ ಹೆಪ್ಟಾಥ್ಲಾನ್ನಲ್ಲಿ ನಂದಿನಿ ಅಗಸರ ಅವರು 800 ಮೀಟರ್ ಓಟವನ್ನು 2:15.33 ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಮುಗಿಸಿ ಕಂಚಿನ ಪದಕ ಗೆದ್ದಿದ್ದಾರೆ.ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ನಿಖತ್ ಜರೀನ್ 2023ರ ಏಷ್ಯಾಡ್ ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಪಡೆದರು.