ಮುಂಬೈ: ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್
ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಬಿಗು ಬೌಲಿಂಗ್ ನೆರವಿನಿಂದ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿದ ಭಾರತ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿತು. ದಿಟ್ಟ ಹೋರಾಟ ನಡೆಸಿದ ಇಂಗ್ಲೆಂಡ್ ವಿರುದ್ಧ 7 ರನ್ಗಳ ರೋಚಕ ಜಯ ದಾಖಲಿಸಿದ ಭಾರತ ಸತತ ಎರಡನೇ ಬಾರಿ
ಫೈನಲ್ ಪ್ರವೇಶಿಸಿತು.ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು. ಇದಕ್ಕೆ ದಿಟ್ಟ ಹೋರಾಟ ನೀಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿ 7 ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಪರ ಜೋಸೆಫ್ ಬೆಥಲ್ ಸ್ಪೋಟಕ ಶತಕ ಸಿಡಿಸಿದರು. ಬೆಥೆಲ್ 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 105 ರನ್ ಬಾರಿಸಿದರು. ಜೋಸ್ ಬಟ್ಲರ್(25), ವಿಲ್ ಜಾಕ್ಸ್(35) ರನ್ ಬಾರಿಸಿದರು.

ಭಾರತದ ಪರ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಉತ್ತಮ ಬೌಲಿಂಗ್ ನಡೆಸಿದರು. ಬುಮ್ರಾ 33 ರನ್ ನೀಡಿ 1ವಿಕೆಟ್, ಪಾಂಡ್ಯ 38 ರನ್ ನೀಡಿ 2 ವಿಕೆಟ್ ಪಡೆದರು. 4 ಓವರ್ನಲ್ಲಿ 51 ರನ್ ನೀಡಿದ ಅರ್ಷದೀಪ್ ಸಿಂಗ್ ಹಾಗೂ 64 ರನ್ ನೀಡಿದ ವರುಣ್ ಚಕ್ರವರ್ತಿ ದುಬಾರಿಯಾದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (9 ರನ್) ಬೇಗನೆ ವಿಕೆಟ್ ಒಪ್ಪಿಸಿ ಹೊರನಡೆದರು.ನಂತರ ಜೊತೆಯಾದ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಇಂಗ್ಲೆಂಡ್ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಇಶಾನ್ ಕಿಶನ್ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರೆ, ಸಂಜು ಸ್ಯಾಮ್ಸನ್
42ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ
89 ರನ್ ಗಳಿಸುವ ಮೂಲಕ ಭಾರತವನ್ನು

ಆರಂಭಿಕ ಆಘಾತದಿಂದ ಪಾರು ಮಾಡಿದರು.ನಂತರದ ಬಂದ ಶಿವಂ ದುಬೆ 25 ಎಸೆತಗಳಲ್ಲಿ 1 ಬೌಂಡರಿ ಹಾಗೂ 4ಸಿಕ್ಸರ್ ನೆರವಿನಿಂದ 43 ರನ್), ತಿಲಕ್ ವರ್ಮಾ 7 ಎಸೆತಗಳಲ್ಲಿ 3 ಸಿಕ್ಸರ್ ನೆರವಿನಿಂದ
27 ರನ್), ಹಾರ್ದಿಕ್ ಪಾಂಡ್ಯ
12 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ
27 ರನ್ ಸಿಡಿಸುವ ಮೂಲಕ ಭಾರತದ ಮೊತ್ತವನ್ನು 253ಕ್ಕೆ ಹೆಚ್ಚಿಸಿದರು. ಭಾರತದ ಇನ್ನಿಂಗ್ಸ್ನಲ್ಲಿ19 ಸಿಕ್ಸರ್ಗಳು ದಾಖಲಾದವು. ಸತತ ಎರಡನೇ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.







