ಲಕ್ನೊ:ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಅಲ್ಪ ಮೊತ್ತಕ್ಕೆ ಕುಸಿದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದ್ದು ಇಂಗ್ಲೆಂಡ್ಗೆ 230 ರನ್ ಗುರಿ ನೀಡಿದೆ. ಆರಂಭದಿಂದಲೇ ಬಿಗು ದಾಳಿ ನಡೆಸಿದ ಇಂಗ್ಲೆಂಡ್ ಬೌಲರ್ಗಳ ಮುಂದೆ ಭಾರತದ ಬ್ಯಾಟರ್ಗಳು ರನ್ ಗಳಿಸಲು
ಪರದಾಡಿದರು. ಈ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಭಾರತದ ಬ್ಯಾಟಿಂಗ್ ಮೊದಲ ಬಾರಿಗೆ ಅಲ್ಪ ಮೊತ್ತಕ್ಕೆ
ಕುಸಿಯಿತು. ಭಾರತದ ನಾಯಕ ರೋಹಿತ್ ಶರ್ಮ ಅರ್ಧ ಶತಕ ಗಳಿಸಿದರೆ ಸೂರ್ಯಕುಮಾರ್ ಯಾದವ್ ಮತ್ತು ಕೆ.ಎಲ್.ರಾಹುಲ್ ಅಮೂಲ್ಯ ಕೊಡುಗೆ ನೀಡಿದರು. ಜವಾಬ್ದಾರಿಯುತ ಆಟ ಆಡಿದ ರೋಹಿತ್ ಶರ್ಮ 101 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 87 ರನ್ ಗಳಿಸಿದರು. ಆರಂಭದಿಂದಲೇ ರೋಹಿತ್ ಭರ್ಜರಿ ಹೊಡೆತಕ್ಕೆ ಕೈ ಹಾಕಿದರೂ, ನಿರಂತರ ವಿಕೆಟ್ ಬಿದ್ದ ಕಾರಣ ಭಾರತದ ಬ್ಯಾಟಿಂಗ್ ತೆವಳುತ್ತಾ ಸಾಗಿತ್ತು.
ಸೂರ್ಯಕುಮಾರ್ ಯಾದವ್ 47 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಬಿರುಸಿನ 49 ರನ್ ಗಳಿಸಿ ಅರ್ಧ ಶತಕದ ಹೊಸ್ತಿಲಲ್ಲಿ ಎಡವಿದರು. ಕೆ.ಎಲ್.ರಾಹುಲ್ 58 ಎಸೆತಗಳಲ್ಲಿ 3 ಬೌಂಡರಿ ಸಹೀತ 39 ರನ್ ಗಳಿಸಿದರು. 40 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ರೋಹಿತ್ ಶರ್ಮ ಹಾಗೂ ಕೆ.ಎಲ್.ರಾಹುಲ್ 4ನೇ ವಿಕೆಟ್ಗೆ 91 ರನ್ ಜೊತೆಯಾಟ ನೀಡಿ ಅಲ್ಪ ಚೇತರಿಕೆ ನೀಡಿದರು.
ಶುಭ್ಮನ್ ಗಿಲ್(9), ವಿರಾಟ್ ಕೊಹ್ಲಿ(0), ಶ್ರೇಯಸ್ ಅಯ್ಯರ್(4), ರವೀಂದ್ರ ಜಡೇಜ(8), ಮಹಮ್ಮದ್ ಶಮಿ(1) ಬೇಗನೇ ವಿಕೆಟ್ ಕೈ ಚೆಲ್ಲಿದರು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ(16) ಕುಲ್ದೀಪ್ ಯಾದವ್ (ಅಜೇಯ 9) ಸ್ಕೋರ್ ಅಲ್ಪ ಏರಿಸಿದರು.
ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 3 ವಿಕೆಟ್, ಕ್ರಿಸ್ ವೋಕ್ಸ್, ಆದಿಲ್ ರಶೀದ್ ತಲಾ 2 ವಿಕೆಟ್ ಹಾಗೂ ಮಾರ್ಕ್ ವುಟ್ ಒಂದು ವಿಕೆಟ್ ಪಡೆದರು.