ಗುವಾಹಟಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟರ್ಗಳ ಬ್ಯಾಟಿಂಗ್ ವೈಫಲ್ಯ ಮುಂದುವರಿದಿದೆ. ಮೊದಲ ಇನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ವೇಗಿ ಮಾರ್ಕೊ ಜಾನ್ಸನ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಭಾರತ ತಂಡ ಕೇವಲ
201 ರನ್ಗಳಿಗೆ ಆಲೌಟ್ ಆಯಿತು. ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ.
ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕರಾದ ರಿಯಾನ್ ರಿಕಲ್ಟನ್ ಅಜೇಯ 13 ಹಾಗೂ ಐಡನ್ ಮಾರ್ಕರಂ ಅಜೇಯ 12 ರನ್ಗಳಿಸಿ ನಾಳಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.ಭಾರತ ತನ್ನ ಮೊದಲ ಇನಿಂಗ್ಸ್ನಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 97 ಎಸೆತಗಳಲ್ಲಿ 58 ರನ್ (7 ಬೌಂಡರಿ, 1 ಸಿಕ್ಸರ್) ಹಾಗೂ ವಾಷಿಂಗ್ಟನ್ ಸುಂದರ್ 92 ಎಸೆತಗಳಲ್ಲಿ 48 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳು ಉತ್ತಮ ಮೊತ್ತ ಬಾರಿಸುವಲ್ಲಿ ವಿಫಲರಾದರು.ದಕ್ಷಿಣ ಆಫ್ರಿಕಾದ ಪರ ಮಾರ್ಕೊ ಯಾನ್ಸೆನ್ 6 ವಿಕೆಟ್ ಪಡೆದ ಮಿಂಚಿದರು. ಶಿಮೊನ್ ಹಾರ್ಮರ್ ಮೂರು ಮತ್ತು ಕೇಶವ್ ಮಹಾರಾಜ್ ಒಂದು ವಿಕೆಟ್ ಕಬಳಿಸಿದರು.
ಎರಡು ಪಂದ್ಯಗಳ ಸರಣಿಯನ್ನು ಸಮಬಲಗೊಳಿಸಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ ತಂಡವಿದೆ.













