ಕೋಲ್ಕತ್ತ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಿಸಿ ಏಕದಿನ ಕ್ರಿಕೆಟ್ನಲ್ಲಿ ಸಚಿನ್ ಸಾಧನೆ ಸರಿಗಟ್ಟಿದ್ದಾರೆ. ತನ್ನ 35ನೇ ಹುಟ್ಟು ಹಬ್ಬದ ದಿನ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಞ ಭಾರತ ಉತ್ತಮ ಮೊತ್ತ ಪೇರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ

5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ. ವಿರಾಟ್ ಕೊಹ್ಲಿ 121 ಎಸೆತಗಳಲ್ಲಿ 10 ಬೌಂಡರಿ ನೆವಿನಿಂದ ಅಜೇಯ 101 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಕ್ರೀಸಿಗೆ ಬಂದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ 49 ಶತಕ ದಾಖಲಿಸುವುದರೊಂದಿಗೆ ಸಚಿನ್ ಅವರ ಹೆಸರಲ್ಲಿದ್ದ ಅತೀ ಹೆಚ್ಚು ಶತಕದ ದಾಖಲೆ ಸರಿಗಟ್ಟಿದರು. ಈ ಪಂದ್ಯದಲ್ಲಿ ರಕ್ಷಣಾತ್ಮಕ ಆಟದ ಮೂಲಕ ವಿರಾಟ್ ತಮ್ಮ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದರು.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸಚಿನ್ ತೆಂಡುಲ್ಕರ್, ಒಟ್ಟು 452 ಪಂದ್ಯಗಳಲ್ಲಿ 49 ಶತಕದೊಂದಿಗೆ ಅತೀ ಹೆಚ್ಚು ಶತಕ ಬಾರಿಸಿದ್ದರೆ. ವಿರಾಟ್ ಕೊಹ್ಲಿ 288 ಪಂದ್ಯಗಳಲ್ಲಿ 49 ಏಕದಿನ ಶತಕ ಬಾರಿಸಿ ತಮ್ಮ, ಒಟ್ಟಾರೆ ಅಂತರಾಷ್ಟ್ರೀಯ ಶತಕ ವನ್ನು 79 ಕ್ಕೆ ಏರಿಸಿದ್ದಾರೆ. 2023ರ ಏಕದಿನ ವಿಶ್ವಕಪ್ನಲ್ಲಿ ಎರಡು ಶತಕ ಹಾಗೂ 4 ಅರ್ಧ ಶತಕ ದಾಖಲಿಸಿದ ಕೊಹ್ಲಿ 8 ಪಂದ್ಯಗಳಿಂದ 543 ರನ್ ಬಾರಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ
ನಾಯಕ ರೋಹಿತ್ ಶರ್ಮ ಹಾಗೂ ಶುಭ್ಮನ್ ಗಿಲ್ ಸ್ಪೋಟಕ ಆರಂಭ ನೀಡಿದರು. ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಅವರು ಮೊದಲ ವಿಕೆಟ್ಗೆ 5.5 ಓವರ್ಗಳಲ್ಲಿ 62 ರನ್ ಕಲೆ ಹಾಕಿದರು. 24 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 40 ರನ್ ಗಳಿಸಿದ ರೋಹಿತ್ ಹಾಗೂ 24 ಎಸೆತಗಳಲ್ಲಿ 23 ರನ್ ಬಾರಿಸಿ ಶುಭ್ಮನ್ ಗಿಲ್ ಔಟ್ ಆದರು. ಬಳಿಕ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 3ನೇ ವಿಕೆಟ್ಗೆ 134 ರನ್ ಕಲೆ ಹಾಕಿದರು. ಅಯ್ಯರ್ 87 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 77 ರನ್ ಬಾರಿಸಿದರು. ಕೊನೆಯಲ್ಲಿ 14 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 22 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್ ಹಾಗೂ 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 29 ರನ್ ಗಳಿಸಿದ ರವೀಂದ್ರ ಜಡೇಜ ಭಾರತದ ಸ್ಕೋರ್ ಏರಿಸಿದರು.









