ಪಲೆಕೆಲೆ: ಭಾರತ ತಂಡವು ಶ್ರೀಲಂಕಾ ಎದುರಿನ ಸರಣಿಯ ಕೊನೆಯ ಟಿ20 ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಜಯ ಸಾಧಿಸಿತು. ಇದರೊಂದಿಗೆ ಸರಣಿಯನ್ನು 3–0ಯಿಂದ ತನ್ನದಾಗಿಸಿಕೊಂಡಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಹೀಷ ತೀಕ್ಷಣ (28ಕ್ಕೆ3) ಅವರ ಬೌಲಿಂಗ್ ಬಲದಿಂದ
ಶ್ರೀಲಂಕಾ ತಂಡವು ಭಾರತ ತಂಡವನ್ನು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 137 ರನ್ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು. ಗುರಿ ಬೆನ್ನಟ್ಟಿದ ಲಂಕಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು 137 ರನ್ ಗಳಿಸಿತು. ಭಾರತದ ಪರ ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ರಿಂಕು ಸಿಂಗ್ ಮತ್ತು ಸೂರ್ಯಕುಮಾರ್ ಅವರು ತಲಾ ಎರಡು ವಿಕೆಟ್ ಗಳಿಸಿದರು. ಅಲ್ಲದೇ ಉತ್ತಮ ಫೀಲ್ಡಿಂಗ್ ಮೂಲಕ ರನ್ಗಳಿಗೆ ತಡೆಯೊಡ್ಡಿದರು. ಇದರಿಂದಾಗಿ ಸಮಬಲವಾಯಿತು. ಹಿಂದಿನ ಎರಡೂ ಪಂದ್ಯದಂತೆ ಈ ಪಂದ್ಯದಲ್ಲೂ ಲಂಕಾ ಉತ್ತಮ ಆರಂಭ ಪಡೆದು, ನಂತರ ಕುಸಿಯಿತು.ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡವು 2 ರನ್ ಗಳಿಸಿತು. ಇದಕ್ಕುತ್ತರವಾಗಿ ಸೂರ್ಯ ಒಂದು ಬೌಂಡರಿ ಹೊಡೆದು ಜಯಭೇರಿ ಬಾರಿಸಿದರು.
ಇದಕ್ಕೂ ಮುನ್ನ ಶುಭಮನ್ ಗಿಲ್ (39; 37ಎ, 4X3), ರಿಯಾನ್ ಪರಾಗ್ (26; 18ಎ) ಮತ್ತು ವಾಷಿಂಗ್ಟನ್ ಸುಂದರ್ (25; 18ಎ) ಅವರನ್ನು ಬಿಟ್ಟರೆ ಉಳಿದ ಬ್ಯಾಟರ್ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ತೀಕ್ಷಣ ಹಾಗೂ ವನಿಂದು ಹಸರಂಗಾ ಅವರ ದಾಳಿಯಿಂದಾಗಿ ಭಾರತ 48 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಇದರಿಂದಾಗಿ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಆತಂಕ ಎದುರಿಸಿತ್ತು. ಈ ಹಂತದಲ್ಲಿ ಗಿಲ್ ಮತ್ತು ರಿಯಾನ್ ಪರಾಗ್ ಆರನೇ ವಿಕೆಟ್ಗೆ 54 ರನ್ ಸೇರಿಸಿದರು. ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು. ವಾಷಿಂಗ್ಟನ್ ಸುಂದರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಪೂರ್ಣಾವಧಿ ನಾಯಕನಾಗಿ ಸೂರ್ಯಕುಮಾರ್ ಯಾದವ್ ಆಡಿದ ಮೊದಲ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.