ಅಹಮದಾಬಾದ್: ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಆತಿಥೇಯ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ30 ರನ್ ಅಂತರದ ಗೆಲುವು ದಾಖಲಿಸಿದೆ.ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು 3-1ರ ಅಂತರದಿಂದ ವಶಪಡಿಸಿಕೊಂಡಿತು. ನಾಲ್ಕನೇ ಪಂದ್ಯ ದಟ್ಟವಾದ ಮಂಜಿನಿಂದಾಗಿ ರದ್ದಾಗಿತ್ತು.ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 231 ರನ್ ಪೇರಿಸಿತು.ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 201 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕ್ವಿಂಟನ್ ಡಿಕಾಕ್ ಗರಿಷ್ಠ 65 ರನ್ (35 ಎಸೆತ) ರನ್ ಗಳಿಸಿದರು.ವರುಣ್ ಚಕ್ರವರ್ತಿ ನಾಲ್ಕು, ಜಸ್ಪ್ರೀತ್ ಬೂಮ್ರಾ ಎರಡು ಮತ್ತು ಅರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಗಳಿಸಿದರು. ಈ ಪೈಕಿ ಬೂಮ್ರಾ ನಾಲ್ಕು ಓವರ್ಗಳಲ್ಲಿ 17 ರನ್ ಮಾತ್ರ ನೀಡಿ ಗಮನಸೆಳೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತು.ಭಾರತದ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 21 ಎಸೆತದಲ್ಲಿ 34 ರನ್ (6 ಬೌಂಡರಿ ಹಾಗೂ 1 ಸಿಕ್ಸರ್) ಹಾಗೂ ಸಂಜು ಸ್ಯಾಮ್ಸನ್ 22 ಎಸೆತದಲ್ಲಿ 37 ರನ್ (4 ಬೌಂಡರಿ ಹಾಗೂ 2 ಸಿಕ್ಸರ್) ಸಿಡಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು.ನಾಯಕ ಸೂರ್ಯಕುಮಾರ್ ಯಾದವ್ 7 ಎಸೆತಗಳಲ್ಲಿ 5 ರನ್ ಗಳಿಸುವ ಮೂಲಕ ಮತ್ತೆ ವೈಫಲ್ಯ ಅನುಭವಿಸಿದರು.
ತಿಲಕ್ ವರ್ಮಾ 42 ಎಸೆತದಲ್ಲಿ 73 ರನ್ (10 ಬೌಂಡರಿ ಹಾಗೂ 1 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ 25 ಎಸೆತದಲ್ಲಿ 63 ರನ್ ( 5 ಬೌಂಡರಿ ಹಾಗೂ 5 ಸಿಕ್ಸರ್) ಸ್ಪೋಟಕ ಆಟವಾಡುವ ಮೂಲಕ ತಂಡದ ಮೊತ್ತವನ್ನು 200 ರನ್ ಗಡಿ ದಾಟಿಸಿದರು.
ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಹಾಗೂ ವರುಣ್ ಚಕ್ರವರ್ತಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.













