ದುಬೈ:ಆರಂಭಿಕರಾದ ಶುಭ್ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು 6 ವಿಕೆಟ್ ಅಂತರದಲ್ಲಿ ಮಣಿಸಿತು.ಈ ಮೂಲಕ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಸತತ
ಎರಡನೇ ಜಯ ದಾಖಲಿಸಿತು.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಗುರಿ ಬೆನನ್ನಟ್ಟಿದ ಭಾರತ 18.5ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಗೆಲುವಿನ ನಗು ಬೀರಿತು.
ಭಾರತಕ್ಕೆ ಅಭಿಷೇಕ್ ಶರ್ಮ ಹಾಗೂ ಶುಭ್ಮನ್ ಗಿಲ್ ಸ್ಪೋಟಕ ಆರಂಭ ನೀಡಿದರು. ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿದ ಆರಂಭಿಕ ಜೋಡಿ ಪಾಕ್ ಬೌಲರ್ಗಳ ಬೆವರಿಳಿಸಿದರು. ಇವರೀರ್ವರು ಮೊದಲ ವಿಕೆಟ್ಗೆ 9.5 ಓವರ್ಗಳಲ್ಲಿ 105 ರನ್ ಸೇರಿಸಿ ಭದ್ರ ಬುನಾದಿ ಹಾಕಿದರು. ಅಭಿಷೇಕ್ ಶರ್ಮ 39 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ನೆರವಿನಿಂದ 74 ರನ್ ಸಿಡಿಸಿದರು. ಗಿಲ್ 28 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 47 ರನ್ ಬಾರಿಸಿದರು.ನಾಯಕ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಔಟ್ ಆದರೆ ಸಂಜು ಸ್ಯಾಮ್ಸನ್ 13 ರನ್ ಬಾರಿಸಿದರು. 19 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗು ಸಿಕ್ಸರ್ ಒಳಗೊಂಡ 30 ರನ್ ಬಾರಿಸಿದ ತಿಲಕ್ ವರ್ಮ ಹಾಗೂ 7 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ತಂಡವನ್ನು ಜಯದ ದಡ ಸೇರಿಸಿದರು.
ಇದಕ್ಕೂ ಮೊದಲು ಆರಂಭಿಕ ಸಾಹಿಬ್ಜಾದಾ ಫರ್ಹಾನ್ ಅವರ ಅರ್ಧಶತಕದ ನೆರವಿನೊಂದಿಗೆ ಪಾಕಿಸ್ತಾನ 172 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಫರ್ಹಾನ್ 45 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ಗಳಿದ್ದ 58 ರನ್ ಗಳಿಸಿದರು.ಭಾರತದ ಪರ ಶಿವಂ ದುಬೆ 2 ವಿಕೆಟ್, ಹಾರ್ದಿಕ್ ಪಾಂಡ್ಯ, ಬೂಮ್ರಾ, ಕುಲದೀಪ್ 1 ವಿಕೆಟ್ ಪಡೆದರು.





