ಅಹ್ಮದಾಬಾದ್:ಸತತ ಎರಡನೇ ಪಂದ್ಯದಲ್ಲಿಯೂ
ನಾಯಕನ ಆಟ ಪ್ರದರ್ಶಿಸಿದ ರೋಹಿತ್ ಶರ್ಮ ಅವರ ಭರ್ಜರಿ ಇನ್ನೀಂಗ್ಸ್ನ ನೆರವಿನಿಂದ ಭಾರತ ಪಾಕಿಸ್ತಾನದ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ.ಈ ಮೂಲಕ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ 1.4 ಲಕ್ಷ ಪ್ರೇಕ್ಷಕರಿಗೆ ಹಾಗೂ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ದಸರಾ ಹಬ್ಬದ ಸಂಭ್ರಮದ ಆರಂಭದ ಮುನ್ನಾ ದಿನ
ಗೆಲುವಿನ ಸಿಹಿ ನೀಡಿದೆ. ಗೆಲುವಿಗೆ 192 ರನ್ ಗುರಿ ಪಡೆದ ಭಾರತ 30.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ವಿಶ್ವಕಪ್ ಕ್ರಿಕೆಟ್ನಲ್ಲಿ ಇದುವರೆಗೆ ಪಾಕಿಸ್ತಾನದ ವಿರುದ್ಧ ಅಡಿದ ಎಲ್ಲಾ 8 ಪಂದ್ಯಗಳನ್ನೂ ಗೆಲ್ಲುವ ಮೂಲಕ ಅಜೇಯ ದಾಖಲೆ ಮುಂದುವರಿಸಿತು. ಈ ವಿಶ್ವಕಪ್ನಲ್ಲಿ ಭಾರತ ಆಡಿದ 3ನೇ ಪಂದ್ಯಗಳನ್ನೂ ಗೆದ್ದಿದೆ. ಸತತ ಎರಡನೇ ಪಂದ್ಯದಲ್ಲಿಯೂ ಭರ್ಜರಿ ಇನ್ನೀಂಗ್ಸ್ ಕಟ್ಟಿದ ರೋಹಿತ್ ಶರ್ಮ 63 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿ ನೆರವಿನಿಂದ 86 ರನ್ ಸಿಡಿಸಿ ಭದ್ರ ಬುನಾದಿ ಹಾಕಿದರು. ಕಳೆದ ಪಂದ್ಯದಲ್ಲಿ ಅಪ್ಘಾನಿಸ್ತಾನ ವಿರುದ್ದ ರೋಹಿತ್ ಶರ್ಮ ಭರ್ಜರಿ ಶತಕ ಸಿಡಿಸಿದ್ದರು.
ಶ್ರೇಯಸ್ ಅಯ್ಯರ್ ಅರ್ಧ ಶತಕ ಸಿಡಿಸಿದರು. ಶ್ರೇಯಸ್ 62 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 53 ರನ್ ಗಳಿಸಿದರು. ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ತಲಾ 16 ರನ್ ಗಳಿಸಿದರು. ಕೆ.ಎಲ್.ರಾಹುಲ್ ಅಜೇಯ 19 ರನ್ ಬಾರಿಸಿದರು. ಪಾಕ್ ಪರ ಶಹೀನ್ ಅಪ್ರಿಧಿ ಎರಡು ವಿಕೆಟ್ ಪಡೆದರರು
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ
ತಂಡ 42.5 ಓವರ್ಗಳಲ್ಲಿ 191 ರನ್ಗೆ ಆಲ್ ಔಟಾಯಿತು.
ಜವಾಬ್ದಾರಿಯುತ ಆಟವಾಡಿದ ಪಾಕ್ ನಾಯಕ ಬಾಬರ್ ಅಝಮ್ ಹಾಗೂ ಮುಹಮ್ಮದ್ ರಿಝ್ವಾನ್ ಉತ್ತಮ ಅಡಿಪಾಯ ಹಾಕಿದರೂ ಇವರಿಬ್ಬರೂ ಔಟಾದ ಬಳಿಕ ಪಾಕಿಸ್ತಾನದ ಬ್ಯಾಟಿಂಗ್ ಕುಸಿಯಿತು. 2 ವಿಕೆಟ್ಗೆ 155 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದ್ದ ಪಾಕಿಸ್ತಾನ ಬಳಿಕ ತರಗಲೆಗಳಂತೆ ಕುಸಿಯಿತು.
ಬಾಬರ್ ಅಝಮ್ 50 ರನ್ ಗಳಿಸಿದರೆ, ಮುಹಮ್ಮದ್ ರಿಝ್ವಾನ್ 49 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಆರಂಭಿಕ ಅಬ್ದುಲ್ ಶಕೀಲ್ 20 ರನ್,ಇಮಾಮ್ ಉಲ್ ಹಖ್ 36 ರನ್ ಗಳಿಸಿದರೆ ಸೌದ್ ಶಕೀಲ್ 6, ಇಫ್ತಿಕಾರ್ ಅಹ್ಮದ್ 4, ಶಾದಾಬ್ ಖಾನ್ 2, ಮೊಹಮ್ಮದ್ ನವಾಝ್ 4, ಹಸನ್ ಅಲಿ 12, ಹ್ಯಾರೀಸ್ ರೌಫ್ 2, ಶಹೀನ್ ಅಫ್ರಿದಿ 2 ರನ್ ಗಳಿಸಿ ಬಹು ಬೇಗನೇ ಪೆವಿಲಿಯನ್ ಸೇರಿದರು.
ಭಾರತ ತಂಡದ ಬೌಲರ್ಗಳ ಉತ್ತಮ ದಾಳಿಗೆ ಸಿಲುಕಿದ ಪಾಕ್ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಭಾರತದ ವೇಗ ಹಾಗೂ ಸ್ಪಿನ್ ಬೌಲಿಂಗ್ ದಾಳಿಗೆ ತತ್ತರಿಸಿತು.
ಜಸ್ಪ್ರೀತ್ ಬೂಮ್ರಾ, ಕುಲ್ ದೀಪ್ ಯಾದವ್,ಮುಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ತಲಾ 2 ವಿಕೆಟ್ ಪಡೆದು ಮಿಂಚಿದರು.