ಮೆಲ್ಬರ್ನ್: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಭಾರತಕ್ಕೆ 4 ವಿಕೆಟ್ ಅಂತರದ ರೋಚಕ ಗೆಲುವು ತಂದುಕೊಟ್ಟರು. ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 160 ರನ್ ಗುರಿ ಪಡೆದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನಗ ಗಳಿಸಿತು. ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 6 ಬೌಂಡರಿ ಹಾಗು 4 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 82 ರನ್ ಗಳಿಸಿ ಮಿಂಚಿದರು. ಕೊಹ್ಲಿಗೆ ಭರ್ಜರಿ ಸಾಥ್ ನೀಡಿದ

ಹಾರ್ದಿಕ್ ಪಾಂಡ್ಯ 37 ಎಸೆತಗಳಲ್ಲಿ 40 ರನ್ ಗಳಿಸಿದರು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159ರನ್ ಕಲೆಹಾಕಿತ್ತು. ಶಾನ್ ಮಸೂದ್ (ಔಟಾಗದೆ 52 ರನ್) ಮತ್ತು ಇಫ್ತಿಕರ್ ಅಹಮದ್ (51 ರನ್) ಅರ್ಧಶತಕ ಸಿಡಿಸಿ ಮಿಂಚಿದ್ದರು. ಈ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ (4) ಹಾಗೂ ಉಪನಾಯಕ ಕೆ.ಎಲ್.ರಾಹುಲ್ (4) ತಂಡದ ಮೊತ್ತ 10 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ಬಂದ ಸೂರ್ಯಕುಮಾರ್ ಯಾದವ್ (15) ಮತ್ತು ಅಕ್ಷರ್ ಪಟೇಲ್ (2) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಕೇವಲ 31 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕಂಡು ಸಂಕಷ್ಟಕ್ಕೆ ಸಿಲುಕಿತ್ತು.ಈ ಹಂತದಲ್ಲಿ ಜೊತೆಯಾದ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ, ವಿಕೆಟ್ ಬೀಳದಂತೆ ಎಚ್ಚರಿಕೆಯ ಆಟವಾಡಿದರು. ನಿಧಾನವಾಗಿ ರನ್ ಗತಿಯನ್ನೂ ಹೆಚ್ಚಿಸಿ 5ನೇ ವಿಕೆಟ್ ಪಾಲುದಾರಿಕೆಯಲ್ಲಿ 113 ರನ್ ಕಲೆಹಾಕಿದರು.
ಕೊನೇ ಓವರ್‌ನ ಮೊದಲ ಎಸೆತದಲ್ಲಿ ಪಾಂಡ್ಯ ಔಟಾದರು. ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್ ಅಗತ್ಯ ಇತ್ತು. ಆರ್.ಅಶ್ವಿನ್ ಒಂದು ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮುನ್ನ ಸಂಘಟಿತ ಬೌಲಿಂಗ್ ನಡೆಸಿದ ಭಾರತೀಯ ಬೌಲರ್‌ಗಳು ಪಾಕಿಸ್ಥಾನವನ್ನು ಕಟ್ಟಿ ಹಾಕಿದರು. ಹರ್ಷದೀಪ್ ಸಿಂಗ್ ಹಾಗು ಹಾರ್ದಿಕ್ ಪಾಂಡ್ಯ ತಲಾ ಮೂರು ವಿಕೆಟ್ ಪಡೆದರು. ಮೂರು ವಿಕೆಟ್ ಪಡೆದು 40 ರನ್ ಬಾರಿಸಿದ ಹಾರ್ದಿಕ್ ಪಾಂಡ್ಯ ಅದ್ಭುತ ಆಲ್ ರೌಂಡ್ ಪ್ರದರ್ಶನ ನೀಡಿದರು.