ಇಂದೋರ್:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 99 ರನ್ಗಳಿಂದ ಸೋಲಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-0 ಅಂತರದಲ್ಲಿ ಸರಣಿಯನ್ಬು ಗೆದ್ದುಕೊಂಡಿದೆ. ಏಕದಿನ ವಿಶ್ವ ಕಪ್ ಆರಂಭಕ್ಕೆ ಕೆಲವೇ ದಿನಗಳ ಮೊದಲು ಪಡೆದ ಸರಣಿ ಗೆಲುವು ಭಾರತದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಗೆಲುವಿಗೆ 50 ಓವರ್ಗಳಲ್ಲಿ 400 ರನ್ಗಳ ಬೃಹತ್ ಗೆಲುವಿನ ಗುರಿ ಪಡೆದ ಆಸ್ಟ್ರೇಲಿಯಾ 9 ಓವರ್ಗಳಲ್ಲಿ
ಎರಡು ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿದ್ದಾಗ ಮಳೆ ಆಟಕ್ಕೆ ತಡೆ ಉಂಟಾಯಿತು. ಬಳಿಕ ಮಳೆ ನಿಯಮದಂತೆ ಗೆಲುವಿನ ಗುರಿ 33 ಓವರ್ಗಳಲ್ಲಿ 317 ಎಂದು ನಿಗದಿಪಡಿಸಲಾಯಿತು.ಆಸ್ಟ್ರೇಲಿಯಾ 28.2 ಓವರ್ಗಳಲ್ಲಿ 217 ರನ್ಗಳಿಗೆ ಆಲ್ ಔಟ್ ಆಗಿ 99 ರನ್ ಸೋಲೊಪ್ಪಿಕೊಂಡಿತು.
ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 53 ರನ್, ಸೀನ್ ಅಬಟ್ 54 ರನ್ ಬಾರಿಸಿ ಹೋರಾಟ ನಡೆಸಿದರೂ ಗೆಲುವಿನ ದಡ ಸೇರಲಾಗಲಿಲ್ಲ. ಭಾರತದ ಪರ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ 3 ವಿಕೆಟ್ ಪಡೆದರು. ಪ್ರಸಿದ್ಧ ಕೃಷ್ಣ ಎರಡು ವಿಕೆಟ್ ಪಡೆದರು.
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 399 ರನ್ಗಳಿಸಿತು. ಭಾರತದ ಪರ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಬಿರುಸಿನ ಆಟವಾಡಿ ಭರ್ಜರಿ ಶತಕ ಬಾರಿಸಿದರು. ಕೆ.ಎಲ್.ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಪೋಟಕ ಅರ್ಧ ಶತಕ ಸಿಡಿಸಿ ಬೃಹತ್ ಸ್ಕೋರ್ ದಾಖಲಿಸಲು ನೆರವಾದರು.
ಶುಭಮನ್ ಗಿಲ್ 97 ಎಸೆಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸ್ತ್ ನೆರವಿನಿಂದ 104 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 90 ಎಸೆಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 105 ರನ್ ಗಳಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆಗಳಲ್ಲಿ 6 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 72 ರನ್ ರನ್ ಚಚ್ಚಿದರು. ನಾಯಕನ ಆಟ ಪ್ರದರ್ಶಿಸಿದ ಕೆ.ಎಲ್.ರಾಹುಲ್ 38 ಎಸೆಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ52 ರನ್ ಬಾರಿಸಿದರು. ರಿತುರಾಜ್ ಗಾಯಕ್ವಾಡ್ 8 ರನ್ ಗಳಿಸಿದರೆ, ಇಶಾನ್ ಕಿಸನ್ 18 ಎಸೆತಗಳಲ್ಲಿ ತಲಾ ಎರಡು ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 31 ರನ್ ಗಳಿಸಿದರು.ರವೀಂದ್ರ ಜಡೇಜ ಅಜೇಯ 13 ರನ್ ಗಳಿಸಿದರು.
ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಎರಡನೇ ವಿಕೆಟ್ಗೆ 164 ಎಸೆತಗಳಲ್ಲಿ 200 ರನದ ಜೊತೆಯಾಟ ನಡೆಸಿದ್ದರು.