ಮೊಹಾಲಿ:ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 5 ವಿಕೆಟ್ ಭರ್ಜರಿ ಜಯ ದಾಖಲಿಸಿದೆ. ಗೆಲುವಿಗೆ 276 ರನ್ ಗುರಿ ಬೆನ್ನಟ್ಟಿದ ಭಾರತ 48.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಭಾರತದ ಬ್ಯಾಟರ್ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ನಾಲ್ಕು ಮಂದಿ ಬ್ಯಾಟರ್ಗಳು ಅರ್ಧ ಶತಕ ದಾಖಲಿಸಿದರು. ಆರಂಭಿಕರಾದ
ಶುಭಮನ್ ಗಿಲ್ 63 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 74 ರನ್ ಬಾರಿಸಿ ಟಾಪ್ ಸ್ಕೋರರ್ ಆದರೆ, ಆರಂಭಿಕರಾಗಿ ಕಣಕ್ಕಿಳಿದ ಋತುರಾಕ್ ಗಾಯಕ್ವಾಡ್ 77 ಎಸೆತಗಳಲ್ಲಿ 10 ಬೌಂಡರಿ ಸಹೀತ 71 ರನ್ ಬಾರಿಸಿದರು. ನಾಯಕ ಕೆ.ಎಲ್.ರಾಹುಲ್ 63 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 58 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿದರು.ಇಶಾನ್ ಕಿಸಾನ್ 18 ರನ್, ಶ್ರೇಯಸ್ ಅಯ್ಯರ್ 3, ರವೀಂದ್ರ ಜಡೇಜ ಅಜೇಯ 3 ರನ್ ಗಳಿಸಿದರು. ಶುಭಮನ್ ಗಿಲ್ ಹಾಗೂ ಋತುರಾಜ್ ಮೊದಲ ವಿಕೆಟ್ಗೆ 21.4 ಓವರ್ಗಳಲ್ಲಿ 142 ರನ್ ಜೊತೆಯಾಟ ನಡೆಸಿ ಭರ್ಜರಿ ಆರಂಭ ಒದಗಿಸಿದರು. ಕೆ.ಎಲ್.ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಸೇರಿ 5 ನೇ ವಿಕೆಟ್ಗೆ 80 ರನ್ ಸೇರಿಸಿ ಗೆಲುವು ಖಾತ್ರಿಪಡಿಸಿದರು.ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ಗಳಲ್ಲಿ 276 ರನ್ಗೆ ಆಲ್ ಔಟ್ ಆಯಿತು.
ಡೇವಿಡ್ ವಾರ್ನರ್ 53 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 52 ರನ್ , ಸ್ಟೀವ್ ಸ್ಮಿತ್ 60 ಎಸೆತಗಳನ್ನು ಎದುರಿಸಿ 3 ಬೌಂಡರಿ ಒಂದು ಸಿಕ್ಸರ್ ಸಹಿತ 41 ರನ್, ಕ್ಯಾಮರೋನ್ ಗ್ರೀನ್ 31 ರನ್, ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಶ್(45) ಹಾಗೂ ಮಾರ್ಕಸ್ ಸ್ಟೋನಿಸ್(29 ಚುರುಕಾಗಿ ರನ್ ಗಳಿಸಿದರು.
ಭಾರತದ ಪರ ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿ ನಡೆಸಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. 10 ಓವರ್ನಲ್ಲಿ 51 ರನ್ ನೀಡಿ ಶಮಿ 5 ವಿಕೆಟ್ ಉರುಳಿಸಿದರು. ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಪಡೆದರು.