ವಿಶಾಖಪಟ್ಟಣ: ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಕಹಿ ಮಾಸುವ ಮುನ್ನವೇ ಭಾರತದ ಯುವ ತಂಡ ಟಿ20 ಸವಾಲಿಗೆ ಸಜ್ಜಾಗಿದೆ. ಪ್ರಮುಖ ಆಟಗಾರರು ವಿಶ್ರಾಂತಿಯ ಕಾರಣದಿಂದ ಹೊರಗುಳಿದಿದ್ದು, ಸೂರ್ಯಕುಮಾರ್ ಯಾದವ್ ಸಾರಥ್ಯದಲ್ಲಿ ಯುವ ಆಟಗಾರರ ತಂಡ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಮೊದಲ ಪಂದ್ಯ ಗುರುವಾರ ವಿಶಾಖಪಟ್ಟಣದ ನಡೆಯಲಿದೆ. ಮುಂಬರುವ 2024ರ ಟಿ20 ವಿಶ್ವಕಪ್ಗೆ ತಂಡವನ್ನು
ಕಟ್ಟುವ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ಸೂರ್ಯಕುಮಾರ್ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಸೇರಿ ಪ್ರಮುಖ ಆಟಗಾರರಿಗೆ ವಿಶ್ವಕಪ್ ಟೂರ್ನಿ ಬಳಿಕ ವಿಶ್ರಾತಿ ನೀಡಲಾಗಿದೆ. ಆದರೆ ಇವರಲ್ಲಿ ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಯಾವೆಲ್ಲ ಆಟಗಾರರು ಸ್ಥಾನ ಪಡೆಯಲಿದ್ದಾರೆ ಎಂಬುದು ಸ್ಪಷ್ಟವಿಲ್ಲ.ಯುವ ಟೀಮ್ ಇಂಡಿಯಾಕ್ಕೆ ಇದು ಸತ್ವಪರೀಕ್ಷೆಯಾಗಿರಲಿದೆ.
ವರ್ಷಾರಂಭದಲ್ಲಿ ಲಂಕಾ, ಕಿವೀಸ್, ವೆಸ್ಟ್ ಇಂಡಿಸ್ ಹಾಗೂ ಐರ್ಲೆಂಡ್ ವಿರುದ್ಧ ಟಿ20 ಸರಣಿಗಳಲ್ಲಿ ಆಡಿದ್ದ ಬಹುತೇಕ ಆಟಗಾರರು ಈ ಸರಣಿಯಲ್ಲಿ ಆಡಲಿದ್ದಾರೆ. ಉಭಯ ತಂಡಗಳು 2022ರ ಸೆಪ್ಟೆಂಬರ್ ಬಳಿಕ ಟಿ20ಯಲ್ಲಿ ಮೊದಲ ಬಾರಿಗೆ ಎದುರಾಗಲಿವೆ. ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಆಸೀಸ್ ವಿರುದ್ಧ ಸರಣಿಗೆ ಹಂಗಾಮಿ ತರಬೇತುದಾರರಾಗಿದ್ದಾರೆ.ಇನ್ನೂ ವಿಶ್ವಕಪ್ ಗೆಲುವಿನ ಗುಂಗಿನಲ್ಲಿರುವ ಆಸ್ಟ್ರೆಲಿಯಾ ತಂಡ ಅನುಭವಿ ಹಾಗೂ ಯುವ ಆಟಗಾರರ
ಸಮತೋಲನ ಹೊಂದಿದೆ. ವಿಶ್ವಕಪ್ ತಂಡದಲ್ಲಿದ್ದ ಏಳು ಆಟಗಾರರು ಟಿ20 ಸರಣಿಯಲ್ಲೂ ಕಣಕ್ಕಿಳಿಯಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಗೈರಿನಲ್ಲಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ:
ಸಂಭಾವ್ಯ ತಂಡ: ಇಶಾನ್ ಕಿಶನ್ (ವಿ.ಕೀ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮ, ಸೂರ್ಯಕುಮಾರ್ (ನಾಯಕ), ರಿಂಕು ಸಿಂಗ್, ಅಕ್ಷರ್ ಪಟೇಲ್/ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಆವೇಶ್ ಖಾನ್/ಮುಕೇಶ್ ಕುಮಾರ್.
ಆಸ್ಟ್ರೆಲಿಯಾ:
ಸಂಭಾವ್ಯ ತಂಡ: ಸ್ಟೀವನ್ ಸ್ಮಿತ್, ಮ್ಯಾಥ್ಯೂ ಶಾರ್ಟ್, ಆರೋನ್ ಹಾರ್ಡಿ, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೋಯಿನಿಸ್/ಗ್ಲೆನ್ ಮ್ಯಾಕ್ಸ್ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ, ವಿ.ಕೀ.), ಸೀನ್ ಅಬೋಟ್, ನಥಾನ್ ಎಲ್ಲಿಸ್, ಜೇಸನ್ ಬೆಹ್ರನ್ಡ್ಾರ್, ಆಡಂ ಜಂಪಾ/ತನ್ವೀರ್ ಸಂಘಾ.







