ಕಾನ್ಪುರ: ಟೀಮ್ ಇಂಡಿಯಾ ಸ್ವದೇಶದಲ್ಲಿ ಸತತ 18ನೇ ಟೆಸ್ಟ್ ಸರಣಿ ಜಯದ ಸಿಹಿ ಸವಿದಿದೆ. ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಜಯ ಗಳಿಸಿದ ಭಾರತ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.ಇದರೊಂದಿಗೆ 2013ರಿಂದ 2024ರ ಅವಧಿಯಲ್ಲಿ
ಟೀಮ್ ಇಂಡಿಯಾ ತವರು ನೆಲದಲ್ಲಿ ಸತತ 18ನೇ ಸರಣಿ ಜಯ ದಾಖಲಿಸಿದೆ.ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 1994ರಿಂದ 2000ರ ಅವಧಿಯಲ್ಲಿ ಸ್ವದೇಶದಲ್ಲಿ ಸತತ 10 ಟೆಸ್ಟ್ ಸರಣಿಗಳಲ್ಲಿ ಜಯಿಸಿತ್ತು. ಇದೇ ಸಾಧನೆಯನ್ನು 2004-2008ರ ಅವಧಿಯಲ್ಲೂ ಆಸ್ಟ್ರೇಲಿಯಾ ಪುನರಾವರ್ತಿಸಿತ್ತು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ (ಡಬ್ಲ್ಯುಟಿಸಿ) ಸತತ ಮೂರನೇ ಬಾರಿ ಫೈನಲ್ನತ್ತ ದೃಷ್ಟಿ ನೆಟ್ಟಿರುವ ಟೀಮ್ ಇಂಡಿಯಾ, ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದೆ.
ಭಾರತದ ಶೇಕಡವಾರು ಪಾಯಿಂಟ್ಸ್ 74.24ಕ್ಕೆ ಏರಿಕೆಯಾಗಿದೆ.ಆಸ್ಟ್ರೇಲಿಯಾ (ಶೇ 62.50) ಹಾಗೂ ಶ್ರೀಲಂಕಾ (ಶೇ 55.56) ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.ಮತ್ತೊಂದೆಡೆ ಡಬ್ಲ್ಯುಟಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಬಾಂಗ್ಲಾದೇಶ (ಶೇ 34.38) ಏಳನೇ ಸ್ಥಾನಕ್ಕೆ ಕುಸಿತ ಕಂಡಿದೆ.ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯವು 2025ರ ಜೂನ್ 11ರಿಂದ 15ರವರೆಗೆ ನಡೆಯಲಿದೆ. ಡಬ್ಲ್ಯುಟಿಸಿ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದ ತಂಡಗಳು ಫೈನಲ್ಗೆ ಪ್ರವೇಶಿಸಲಿವೆ.
ಕಳೆದೆರಡು ಆವೃತ್ತಿಗಳಲ್ಲಿ ಫೈನಲ್ಗೆ ಪ್ರವೇಶಿಸಿದ್ದ ಭಾರತ ತಂಡವು ರನ್ನರ್-ಅಪ್ ಆಗಿತ್ತು. 2021ರಲ್ಲಿ ನ್ಯೂಜಿಲೆಂಡ್ ಹಾಗೂ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್ನಲ್ಲಿ ಸೋಲು ಕಂಡಿತ್ತು.