ಪರ್ತ್: ಆಸ್ಟ್ರೇಲಿಯಾ ವಿರುದ್ಧ ಪರ್ತ್ನಲ್ಲಿ ನಡೆಯುತ್ತಿರುವ ಬೋರ್ಡರ್- ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಎದುರಿಸಿದೆ. ತವರಿನಲ್ಲಿ ನ್ಯೂಝಿಲೆಂಡ್ ವಿರುದ್ಧ 0-3 ಸೋಲಿನಿಂದ ಎಚ್ಚೆತ್ತು ಕೊಳ್ಳದ ಟೀಂ ಇಂಡಿಯಾ ಬ್ಯಾಟರ್ಗಳು ಆಸ್ಟ್ರೇಲಿಯಾ ಬೌಲಿಂಗ್ ದಾಳಿ ಮುಂದೆ ತರಗಲೆಗಳಂತೆ ಉದುರಿದವು.ಟಾಸ್ ಗೆದ್ದ ಭಾರತ ನಾಯಕ ಜಸ್ಪ್ರೀತ್ ಬೂಮ್ರಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಊಟದ ವಿರಾಮದ ವೇಳೆಗೆ
ಭಾರತ 4 ವಿಕೆಟ್ ಕಳೆದುಕೊಂಡು 51 ರನ್ ಗಳಿಸಿದೆ. 10 ರನ್ ಗಳಿಸಿದ ರಿಷಬ್ ಪಂತ್ ಹಗೂ 4 ರನ್ ಗಳಿಸಿದ ಧ್ರುವ್ ಜುರೆಲ್ ಕ್ರೀಸ್ನಲ್ಲಿದ್ದಾರೆ.
ಭಾರತದ ಆರಂಭ ಉತ್ತಮವಾಗಿರಲಿಲ್ಲ.
ತಂಡವು 47 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ತ ಪಡಿಕ್ಕಲ್ ಶೂನ್ಯಕ್ಕೆ ಔಟ್ ಆದರು.ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಐದು ರನ್ ಗಳಿಸಿ ನಿರ್ಗಮಿಸಿದರು. ಆ ಮೂಲಕ ಕೊಹ್ಲಿ ಅವರ ಕಳಪೆ ಪ್ರದರ್ಶನ ಮುಂದುವರಿಯಿತು.ಕೆ.ಎಲ್.ರಾಹುಲ್ 26 ರನ್ ಗಳಿಸಿ ಪೆವಿಲಿಯನ್ ಸೇರಿದರು.ಭಾರತೀಯ ಅಗ್ರ ಕ್ರಮಾಂಕದ ಬ್ಯಾಟರ್ಗಳ ರಕ್ಷಣಾತ್ಮಕ ಆಟವು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುತ್ತಿದೆ.
ಬ್ಯಾಟ್ ಮೂಲಕ ಮೊದಲ ರನ್ ಇನಿಂಗ್ಸ್ನ 24ನೇ ಎಸೆತದಲ್ಲಿ ದಾಖಲಾಯಿತು. ಈ ಹಿಂದೆ 2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ನಾಲ್ಕನೇ ಓವರ್ನ ಕೊನೆಯ ಎಸೆತದಲ್ಲಿ ಬ್ಯಾಟ್ ಮೂಲಕ ಮೊದಲ ರನ್ ದಾಖಲಾಗಿತ್ತು.
ತಂಡದಲ್ಲಿ ಇಬ್ಬರು ಹೊಸ ಮುಖಗಳಿದ್ದು, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷೀತ್ ರಾಣಾ ಪದಾರ್ಪಣೆ ಮಾಡಿದ್ದಾರೆ. ಧ್ರುವ್ ಜುರೇಲ್ ಅವರಿಗೂ ಅವಕಾಶ ನೀಡಲಾಗಿದೆ.ಅನುಭವಿ ಆಟಗಾರರಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರನ್ನು ಕೈಬಿಡಲಾಗಿದೆ. ಯುವ ಆಟಗಾರರಾದ ಸರ್ಫರಾಜ್ ಖಾನ್ ಹಾಗೂ ಆಕಾಶ್ ದೀಪ್ ಅವರಿಗೂ ಅವಕಾಶ ನಿರಾಕರಿಸಲಾಗಿದೆ.ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಉಸ್ತುವಾರಿ ನಾಯಕ ಜಸ್ಪ್ರೀತ್ ಬೂಮ್ರಾ ಮುನ್ನಡೆಸುತ್ತಿದ್ದಾರೆ.