ಸುಳ್ಯ:ಸುಳ್ಯದ ಶ್ರೀರಾಂಪೇಟೆಯಲ್ಲಿರುವ ಸವಿನ್ ಕ್ಯಾಂಟೀನ್ ಮಾಲಕರು ಪ್ರತೀ ವರ್ಷ ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ದೀಪಾವಳಿ ದಿನ ಹೋಟೆಲ್ಗೆ ಆಗಮಿಸಿದ ಪ್ರತಿಯೊಬ್ವರಿಗೂ ಉಚಿತ ಅನ್ನ ದಾಸೋಹ ಮಾಡುವ ಮೂಲಕ ಅವರು ದೀಪಾವಳಿಯನ್ನು ಆಚರಿಸುತ್ತಾರೆ. ಸುಳ್ಯ ಉತ್ತರ ಬೀರಮಂಗಲದ ಬಾಲಕೃಷ್ಣ ಎಂ. ಅವರು 2005ರಲ್ಲಿ ಸವಿನ್ ಹೋಟೆಲ್ ಆರಂಭಿಸಿದರು. 2008ರಿಂದ ದೀಪಾವಳಿಯನ್ನು ಈ ರೀತಿ ಆಚರಿಸುತ್ತಾರೆ.ದೀಪಾವಳಿ ಹಬ್ಬದ ದಿನ ತನ್ನ

ಹೋಟೆಲಿಗೆ ಬೆಳಗ್ಗಿನ ಹೊತ್ತು ಭೇಟಿ ನೀಡುವ ನೂರಾರು ಮಂದಿಗೆ ಇಡ್ಲಿ, ವಡೆ, ಕೇಸರಿಬಾತ್, ವೆಜ್ ಪಲಾವ್ ಉಚಿತವಾಗಿ ನೀಡಿ ಸತ್ಕ್ಕರಿಸುತ್ತಾರೆ. ಮಧ್ಯಾಹ್ನ ಆಗಮಿಸುವವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಬಾಲಕೃಷ್ಣ ಹಾಗೂ ಪತ್ನಿ ಶೀಲಾ ಅವರು ಮುಂದೆ ನಿಂತು ಎಲ್ಲರಿಗೂ ಅನ್ನ ದಾಸೋಹ ಮಾಡುತ್ತಾರೆ. ಹೋಟೆಲಿಗೆ ಭೇಟಿ ನೀಡಿ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಕೆ. ಎಂ. ಮುಸ್ತಫ ಬಾಲಕೃಷ್ಣ ಅವರನ್ನು ಅಭಿನಂದಿಸಿದರು. ಬಾಲಕೃಷ್ಣ ಹಾಗೂ ಅವರ ಪತ್ನಿ ಅವರ ಅನ್ನದಾಸೋಹ ಸೇವೆ ನಿಜಕ್ಕೂ ಮಾದರಿ ಕಾರ್ಯ ಎಂದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಸಮಾಜ ಸೇವಕ ಮಂಜುನಾಥ್ ಬಳ್ಳಾರಿ, ಪ್ರಕಾಶ್ ಯಾದವ್, ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು.









