ಸುಳ್ಯ: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಹೋಟೆಲ್, ಕ್ಯಾಂಟೀನ್ ಗಳಲ್ಲಿ ಸ್ವಚ್ಛತೆ, ಗುಣಮಟ್ಟದ ಆಹಾರ ಪೋರೈಕೆ ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿರುವ ಹಿನ್ನಲೆಯಲ್ಲಿ ಸುಳ್ಯ ಪಟ್ಟಣ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ತಪಾಸಣೆ ನಡೆಸಿದರು. ನಗರದ ರಥ ಬೀದಿ, ಕುರುಂಜಿಭಾಗ್ ಇತ್ಯಾದಿ ಕಡೆಗಳಲ್ಲಿ ಕೆಲವು ಹೋಟೆಲ್, ಕ್ಯಾಂಟೀನ್ಗಳಲ್ಲಿ ತಪಾಸಣೆ ನಡೆಸಿದ್ದಾರೆ. ಸ್ವಚ್ಛತೆ ಹದಗೆಟ್ಟಿರುವುದು ಕಂಡು ಬಂದ ಕಾರಣ ಈ ಬಗ್ಗೆ ಪರಿಶೀಲಿಸಿ
ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಚ್ಛತೆ, ಗುಣಮಟ್ಟರಹಿತ ಆಹಾರ ಪೋರೈಕೆ ಇತ್ಯಾದಿ ನ್ಯೂನತೆಗಳು ಕಂಡು ಬಂದಲ್ಲಿ ಅಥವಾ ಈ ಬಗ್ಗೆ ನಿರ್ಧಿಷ್ಟ ದೂರುಗಳು ಬಂದಲ್ಲಿ ಪರಿಶೀಲಿಸಿ ಅಂತಹ ಉದ್ದಿಮೆಗಳ ಪರವಾನಿಗೆ ರದ್ದು ಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.ಅಲ್ಲದೆ ನಗರದ ಬಹುತೇಕ ಉದ್ದಿಮೆದಾರರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪಡೆಯಬೇಕಾಗಿರುವ ಪರವಾನಿಗೆಯನ್ನು ಪಡೆದಿರುವುದು ಕಂಡು ಬಂದಿರುವುದಿಲ್ಲ. ಆಹಾರ ಸುರಕ್ಷತಾ ಕಾಯಿದೆಯನುಸಾರ ಸದ್ರಿ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಗಿರೀಶ್ ಆಹಾರ ಸುರಕ್ಷತಾಧಿಕಾರಿ ಸುಳ್ಯ ಇವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತಾ ಪರವಾನಿಗೆ ಪಡೆಯದೆ ಉದ್ಯಮ ನಡೆಸುವುದು ಕಂಡು ಬಂದಲ್ಲಿ ಅಂತಹ ಉದ್ದಿಮೆದಾರರಿಗೆ ದಂಡ ವಿಧಿಸಲಾಗುವುದು ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಆಹಾರ ಸುರಕ್ಷತಾ ಪರವಾನಿಗೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ತಾಲೂಕು ಅರೋಗ್ಯಾಧಿಕಾರಿ ಕಚೇರಿ, ಸುಳ್ಯ ಈ ಕಚೇರಿಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ. ಹೋಟೆಲ್, ಕ್ಯಾಂಟೀನ್ ತಪಾಸಣಾ ತಂಡದಲ್ಲಿ ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಯಂ. ಹೆಚ್. ಸುಧಾಕರ್, ಸುಳ್ಯ ತಾಲೂಕು ಆಹಾರ ಸುರಕ್ಷತಾಧಿಕಾರಿ ಗಿರೀಶ್ ಮತ್ತು ಸುಳ್ಯ ಪಟ್ಟಣ ಪಂಚಾಯತ್ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕೆ. ಉಪಸ್ಥಿತರಿದ್ದರು. ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಎಲ್ಲಾ ಉದ್ದಿಮೆದಾರರು ಸುಳ್ಯ ಪಟ್ಟಣ ಪಂಚಾಯತ್ ನೊಂದಿಗೆ ಸಹಕರಿಸುವಂತೆ ಮುಖ್ಯಾಧಿಕಾರಿ ಯಂ ಹೆಚ್ ಸುಧಾಕರ್ ವಿನಂತಿಸಿರುತ್ತಾರೆ.