ಸುಳ್ಯ: ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮೂಲಭೂತ ಅಭಿವೃದ್ಧಿ ಕುರಿತು ಚರ್ಚಿಸಲು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆ ಅ.18ರಂದು ಆಸ್ಪತ್ರೆಯಲ್ಲಿ ನಡೆಯಿತು. ಆಸ್ಪತ್ರೆಯ ಮೂಲಭೂತ ಅಭಿವೃದ್ಧಿಗೆ ಸರಕಾರದಿಂದ 1.92 ಕೋಟಿ ರೂ ಅನುದಾನ ಮಂಜೂರಾಗಿದೆ. ಅಲ್ಲದೆ ಸರಕಾರದ ವತಿಯಿಂದ ಆಸ್ಪತ್ರೆಗೆ

ಮತ್ತೊಂದು ಆಮ್ಲಜನಕ ಘಟಕ ನಿರ್ಮಾಣವಾಗಲಿದೆ. 1.92 ಕೋಟಿ ವೆಚ್ಚದಲ್ಲಿ ಸರಕಾರಿ ಆಸ್ಪತ್ರೆಗೆ ಸುಸಜ್ಜಿತ ಶವಾಗಾರ ನಿರ್ಮಾಣ, ತುರ್ತು ನಿಗಾ ಘಟಕದ ನವೀಕರಣ, ಡಯಾಲಿಸಿಸ್ ಕೇಂದ್ರದ ನವೀಕರಣ, ಆಸ್ಪತ್ರೆಯ ನವೀಕರಣ ಮತ್ತಿತರ ಕೆಲಸಗಳನ್ನು ಮಾಡಲು ಕ್ರಿಯಾ ಯೋಜನೆ ರೂಪಿಸಲು ಸಚಿವರು ಇಂಜಿನಿಯರ್‌ಗಳಿಗೆ ಸೂಚಿಸಿದರು. ಅಲ್ಲದೆ 17 ಲಕ್ಷ ರೂ ರಸ್ತೆ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು. 22 ಲಕ್ಷ ರೂ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಆವರಣ ಗೋಡೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲು ಸಚಿವರು ಸೂಚಿಸಿದರು. 56 ಲಕ್ಷ ರೂ ವೆಚ್ಚದಲ್ಲಿ ಆಮ್ಲಜನಕ ಘಟಕ ಮಂಜೂರಾಗಿದ್ದು ಘಟಕ ನಿರ್ಮಾಣಕ್ಕೆ ಸಚಿವರು ಸ್ಥಳ ಪರಿಶೀಲನೆ ನಡೆಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಉಪವಿಭಾಗದ ಮೂಲಕ ಸರಕಾರದಿಂದ ಎಸ್‌ಸಿ ಎಸ್‌ಪಿ ಫಂಡ್‌ನಿಂದ ಮೂಲಭೂತ ಅಭಿವೃದ್ಧಿಗೆ 1.92 ಕೋಟಿ ಅನುದಾನ, ಆಮ್ಲಜನಕ ಘಟಕಕ್ಕೆ 56 ಲಕ್ಷ ಅನುದಾನ

ಬಿಡುಗಡೆಯಾಗಿದೆ. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುನಿಲ್ ಕೇರ್ಪಳ, ಡಾ.ಮನೋಜ್ ಅಡ್ಡಂತ್ತಡ್ಕ, ಗಿರೀಶ್ ಕಲ್ಲುಗದ್ದೆ, ಡಾ.ವಿದ್ಯಾಶಾರದೆ, ಕೇಶವ ಮಾಸ್ತರ್,ಸುಬ್ರಹ್ಮಣ್ಯ ಕೊಡಿಯಾಲಬೈಲು, ದಾಮೋದರ ಮಂಚಿ,ಸಾರ್ವಜನಿಕ ಆಸ್ಪತ್ರೆಯ ಡಾ.ಹಿಮಕರ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಪ್ರಭಾರ) ರಾಜೇಶ್ ರೈ, ಕಿರಿಯ ಇಂಜಿನಿಯರ್ ರಾಘವೇಂದ್ರ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್‌ಗಳಾದ ಮಣಿಕಂಠ, ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು.