ಮಂಗಳೂರು: ನೈತಿಕ ಪೊಲೀಸ್ ಗಿರಿ ತಡೆಯಲು ‘ಆ್ಯಂಟಿ ಕಮ್ಯುನಲ್ ವಿಂಗ್’ ಎಂಬ ನೂತನ ಪೊಲೀಸ್ ಪಡೆಯನ್ನು ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಘೋಷಣೆ ಮಾಡಿದ್ದಾರೆ. ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ಹೊಸ ಘಟಕ ಕಾರ್ಯನಿರ್ವಹಿಸಲಿದೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚು ನಡೆಯುತ್ತಿದೆ. ಇದನ್ನು ತಡೆಯದಿದ್ದರೆ
ಇಲಾಖೆ ಹಾಗೂ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.ಇದಕ್ಕಾಗಿ ಮಂಗಳೂರು ಕಮೀಷನೇಟ್ ವ್ಯಾಪ್ತಿಯಲ್ಲಿ ‘ಆ್ಯಂಟಿ ಕಮ್ಯುನಲ್ ವಿಂಗ್’ ಪ್ರಾರಂಭ ಮಾಡುತ್ತಿದ್ದೇವೆ. ಈ ವಿಂಗ್ನಲ್ಲಿ ಸಮರ್ಥ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು ಎಂದರು.
ಪೊಲೀಸ್ ಇಲಾಖೆಗೆ ಸಾಕಷ್ಟು ಸವಾಲುಗಳಿವೆ. ಕರಾವಳಿ ಭಾಗದಲ್ಲಿ ಒಳ್ಳೆಯ ಜನರಿದ್ದಾರೆ ಎಂಬುದನ್ನು ಇಡೀ ದೇಶವೇ ನಂಬುತ್ತದೆ. ಇದರ ಜತೆಗೆ ಜಿಲ್ಲೆಯಲ್ಲಿ ಶಾಂತಿ, ಕೋಮು ಸಾಮರಸ್ಯ ಇಲ್ಲ ಎಂಬ ಮಾತಿದೆ. ಶಾಂತಿ-ಸೌಹಾರ್ದತೆ ಇಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಮಂಗಳೂರಿಗೆ ಕಂಪೆನಿಗಳು ಹೂಡಿಕೆ ಮಾಡಲು ಬರುತ್ತಿಲ್ಲ. ಯಾವ ಧೈರ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಬೇಕು ಎಂದು ಕೇಳುತ್ತಾರೆ. ಇನ್ನು ಮುಂದೆ ಕೋಮು ಭಾವನೆಗಳನ್ನು ಪ್ರಚೋದನೆ ಮಾಡುವವರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಎಂದರು. ಕರಾವಳಿಯಲ್ಲಿ ಕೋಮು ಸೌಹಾರ್ದತೆ ತರಲು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ. ಕೋಮು ಸೌಹಾರ್ದತೆಯನ್ನು ಕಾಪಾಡಲು ಸರಕಾರ ಹೆಚ್ಚಿನ ಆದ್ಯತೆ ನೀಡಲಾಗುವುದು. ಕರಾವಳಿಯಲ್ಲಿ ಅನೈತಿಕ ಪೊಲೀಸ್ಗಿರಿ ಪ್ರಕರಣಗಳು ಆಗಾಗ ನಡೆಯುತ್ತಿವೆ. ವಿದ್ಯಾವಂತರ ಮತ್ತು ಬುದ್ಧಿವಂತರ ಜಿಲ್ಲೆಗೆ ಇದೊಂದು ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿದರು.ಡ್ರಗ್ಸ್ ನಿಯಂತ್ರಣಕ್ಕೆ ಸೂಚಿಸಲಾಗಿದ್ದು, ಆಗಸ್ಟ್ 15ರ ತನಕ ಡ್ರಗ್ಸ್ ನಿಯಂತ್ರಣಕ್ಕೆ ಗಡುವು ವಿಧಿಸಲಾಗಿದೆ ಎಂದರು.ಹತ್ಯೆಗೀಡಾಗಿರುವ ಫಾಝಿಲ್, ಮಸೂದ್, ಜಲೀಲ್ ಕುಟಂಬಗಳಿಗೆ ಪರಿಹಾರ ಒದಗಿಸಲು ಸರಕಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಪಶ್ಚಿಮ ವಲಯ ಡಿಐಜಿ ಡಾ.ಚಂದ್ರಗುಪ್ತ, ಮಂಗಳೂರು ನಗರ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಉಪಸ್ಥಿತರಿದ್ದರು.