ಸುಳ್ಯ:ಹಿಂದು ಸಮಾಜದಲ್ಲಿ ಏಕತೆ, ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಸುಳ್ಯ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ವತಿಯಿಂದ ಜ.18ರಿಂದ ಫೆ.2ರ ತನಕ 14 ಮಂಡಲಗಳಲ್ಲಿ ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ ನಡೆಯಲಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಎಂ.ಬಿ.ಸದಾಶಿವ ತಿಳಿಸಿದ್ದಾರೆ. ಗಿರಿದರ್ಶಿನಿ ಸಭಾಭವನದಲ್ಲಿ ನಡೆದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ 100ನೇ ವರ್ಷದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದೂ ಸಂಘಟನೆಗಳನ್ನು ಬಲಪಡಿಸುವುದು,
ಗುಣ ಸಂಪನ್ನ ವ್ಯಕ್ತಿ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುಸುವುದು. ಶಿಸ್ತು, ಧೈರ್ಯ, ದೇಶಭಕ್ತಿ, ಪ್ರಾಮಾಣಿಕತೆ, ಸೇವಾ ಚಟುವಟಿಕೆ ಮುಂತಾದವುಗಳನ್ನು ಒಳಗೊಂಡ ವ್ಯಕ್ತಿತ್ವದ ನಿರ್ಮಾಣ, ಸಾಮಾಜಿಕ ಸಾಮರಸ್ಯದ ಮೇಲು-ಕೀಳು ತೊಡೆದು ಹಾಕಿ ಸಮರಸತೆಯ ಬದುಕು ರೂಪಿಸುವುದು.ಪರಿಸರ ಸಂರಕ್ಷಣೆ ಮಾಡುವುದು. ಭೂಮಿ, ಆಕಾಶ, ನೀರು, ಗಾಳಿ, ಅಗ್ನಿ, ಪಂಚ ಭೂತಗಳಿಂದ ನಿರ್ಮಿತವಾದ ಈ ಪರಿಸರದ ಪೋಷಣೆ ನಮ್ಮೆಲ್ಲರ ಕರ್ತವ್ಯ ಎಂಬ ಅರಿವು ಮೂಡಿಸಿ ಮನೆ, ವಠಾರ, ಗ್ರಾಮ ಎಲ್ಲರೂ ಒಟ್ಟಾಗಿ ಸಂಕಲ್ಪ ಮಾಡುವುದು. ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನು ರೂಪಿಸುವುದು.

ಕೌಟುಂಬಿಕ ಮೌಲ್ಯಗಳನ್ನು ಬಲವರ್ದನೆ ಮಾಡುವುದು. ಸ್ವದೇಶಿ ಬದುಕನ್ನು ರೂಪಿಸುವ ಮೂಲಕ ಮಾತೃಭಾಷೆ ಬಳಕೆ, ಉಡುಗೆ ತೊಡುಗೆ, ಸರಳ ಜೀವನ ನಡೆಸುವುದು
ನಾಗರಿಕ ಕರ್ತವ್ಯ ಪ್ರಜ್ಞೆ ಬೆಳೆಸುವುದು. ಸಂವಿಧಾನ, ಕಾನೂನು, ನಿಯಮಪಾಲನೆ, ಶಿಸ್ತು ಎಲ್ಲರೂ ಎಲ್ಲ ಸಂದರ್ಭಗಳಲ್ಲಿ ಪಾಲಿಸುವಂತೆ ಮಾಡುವುದು. ಸದಾ ದೇಶ ಮತ್ತು ಸಮಾಜದ ಕಾಳಜಿ ವಹಿಸುವಂತೆ ಪ್ರೇರಣೆ ನೀಡುವುದು ಸೇರಿದಂತೆ ಗ್ರಾಮಗಳಲ್ಲಿ ಧನಾತ್ಮಕ ಚಿಂತನೆಗಳನ್ನು ರೂಪಿಸುವುದು ಹಿಂದೂ ಸಂಗಮದ ಉದ್ದೇಶ ಎಂದು ಅವರು ಹೇಳಿದರು.
14 ಮಂಡಲಗಳಲ್ಲಿ ಹಿಂದೂ ಸಂಗಮ:
ಹಿಂದೂ ಸಂಗಮ ಆಯೋಜನಾ ಸಮಿತಿಯ ಕಾರ್ಯದರ್ಶಿ ಸುದರ್ಶನ ಸೂರ್ತಿಲ ಮಾತನಾಡಿ ಸುಳ್ಯ ತಾಲೂಕಿನ ಸರಹದ್ದಿನಲ್ಲಿರುವ
ಕೊಡಗಿನ ಹಾಗೂ ಕಡಬ ತಾಲೂಕಿನ ಕೆಲವು ಗ್ರಾಮಗಳು ಸೇರಿದಂತೆ ಒಟ್ಟು 44 ಗ್ರಾಮಗಳು ಒಳಗೊಂಡ 14 ಮಂಡಲಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ.
ಜ.18ರಂದು ಬಾಳಿಲದಲ್ಲಿ ಸಂಜೆ 3.30ರಿಂದ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ, ಜ.18ರಂದು ಗುತ್ತಿಗಾರಿನಲ್ಲಿ ಸಂಜೆ 3.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಜ.24ರಂದು ಸಂಜೆ 3ರಿಂದ ಸುಬ್ರಹ್ಮಣ್ಯ ಮಠದ ಆವರಣದಲ್ಲಿ ಸಭಾ ಕಾರ್ಯಕ್ರಮ ಮತ್ತು ಪೇಟೆಯಲ್ಲಿ ಶೋಭಾಯಾತ್ರೆ, ಜ.25ರಂದು ಪೆರಾಜೆಯಲ್ಲಿ ಸಂಜೆ 3ರಿಂದ ಶೋಭಾಯಾತ್ರೆ, ಜ.25ರಂದು ಅಜ್ಜಾವರದ ಮೇನಾಲದಲ್ಲಿ ಮಧ್ಯಾಹ್ನ 2.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಜ.25ರಂದು ಜಾಲ್ಸೂರು ಪೇಟೆಯಲ್ಲಿ ಸಂಜೆ 3.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ,ಜ.25ರಂದು ಪಂಜದಲ್ಲಿ ಸಂಜೆ 3ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಜ. 25ರಂದು ದೊಡ್ಡತೋಟದ ಎಲಿಮಲೆಯಲ್ಲಿ ಮಧ್ಯಾಹ್ನ 2.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಜ.25ರಂದು ಸುಳ್ಯ ನಗರದ ಪ್ರಭು ಮೈದಾನದಲ್ಲಿ ಸಂಜೆ 3.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಫೆ.1ರಂದು ಸಂಪಾಜೆಯ ಕಲ್ಲುಗುಂಡಿಯಲ್ಲಿ ಮಧ್ಯಾಹ್ನ 2.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಫೆ.1ರಂದು ಐವರ್ನಾಡಿನಲ್ಲಿ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಫೆ.1ರಂದು ಬೆಳ್ಳಾರೆಯಲ್ಲಿ ಸಂಜೆ 3.30ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಫೆ.1ರಂದು ಎಣ್ಮೂರಿನ ಮುರುಳ್ಯ ಮೈದಾನದಲ್ಲಿ ಸಂಜೆ 3ರಿಂದ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ, ಫೆ.2ರಂದು ಹರಿಹರದ ಬಾಳುಗೋಡಿನಲ್ಲಿ ಸಂಜೆ 3ರಿಂದ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಸಂಗಮದ ಗೌರವ ಸಲಹೆಗಾರರಾದ ಡಾ.ಗಿರೀಶ್ ಭಾರದ್ವಾಜ್, ಡಾ.ಯಶೋಧ ರಾಮಚಂದ್ರ, ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಸಂಚಾಲಕ ಡಾ.ಚಂದ್ರಶೇಖರ ನಲ್ಲೂರಾಯ, ಆರ್ಎಸ್ಎಸ್ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ವಿವಿಧ ಮಂಡಲಗಳ ಸಂಚಾಲಕರು ಮತ್ತು ಸಹ ಸಂಚಾಲಕರು ಉಪಸ್ಥಿತರಿದ್ದರು.












