ಸುಳ್ಯ:ಬೇಸಿಗೆಯಲ್ಲಿ ಹೆಚ್ಚಿದ ಬಿಸಿಲು, ತಾಪಮಾನ ಹಾಗು ಉಷ್ಣಾಂಶದಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ. ಹೀಗಾಗಿ, ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಹಾಗು ಸಲಹೆಗಳನ್ನು ನೀಡಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.ಅತಿ ಉಷ್ಣತೆಯಿಂದ ಬರಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು, ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಹೇಳಿದ್ದಾರೆ. ಬೇಸಿಗೆ ಕಾಲದಲ್ಲಿ ಅತಿಯಾದ ಉಷ್ಣಾಂಶದಿಂದ ಸಂಭವಿಸುವ ಅನಾರೋಗ್ಯ ಪರಿಸ್ಥಿತಿಗಳನ್ನು
ತಡೆಯಲು ಸೂಕ್ತ ಕ್ರಮಕೈಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚು ನೀರನ್ನು ಆಗಾಗ್ಗೆ ಸೇವಿಸಬೇಕು,ಪ್ರಯಾಣ ಮಾಡುವ ಸಮಯದಲ್ಲಿ ನೀರು ಜೊತೆ ಇರಬೇಕು,ನಿಂಬೆ ಹಣ್ಣಿನ ಶರಬತ್ತು, ಲಸ್ಸಿ, ಹಣ್ಣಿನ ಜ್ಯೂಸ್, ಮಜ್ಜಿಗೆ ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.
ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಸೌತೆಕಾಯಿ,ಅನಾನಸ್, ಎಳನೀರುಗಳನ್ನು ಸೇವಿಸಬೇಕು. ತಿಳಿ ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ. ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಹ್ಯಾಟ್, ಟವೆಲ್, ಪಾದರಕ್ಷೆ, ಚಪ್ಪಲಿ, ಶೂಗಳನ್ನು ಧರಿಸಬೇಕು. ನೇರವಾಗಿ ಸೂರ್ಯನ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆ ತಡೆಯಲು,ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚಿಡಿ ಹಾಗೂ ತಣ್ಣನೆಯ ಗಾಳಿಯ ಸಂಚಾರಕ್ಕೆ ಅನುಕೂಲವಾಗುವಂತೆ, ರಾತ್ರಿಯ ಕಿಟಕಿಗಳನ್ನು ತೆರೆದಿಡಬೇಕು. ಹೊರಗಿನ ಚಟುವಟಿಕೆಗಳನ್ನು ಆದಷ್ಟೂ ದಿನದ ತಣ್ಣನೆಯ ಸಮಯದಲ್ಲಿ, ಅಂದರೆ ಬೆಳಗಿನ ಹೊತ್ತು ಸಂಜೆಗೆ ಸೀಮಿತವಿರುವಂತೆ ಬದಲಾಯಿಸಿಕೊಳ್ಳಬಹುದು.
ನವಜಾತ ಶಿಶುಗಳು, ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಆರೋಗ್ಯ ಸಮಸ್ಯೆಗಳರುವವರು, ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕು.ಪ್ರತ್ಯೇಕವಾಗಿ ವಾಸಿಸುವ, ವೃದ್ಧರು ಅಥವಾ ರೋಗಿಗಳ ಆರೋಗ್ಯದ ಮೇಲ್ವಿಚಾರಣೆಯನ್ನು ದೈನಂದಿನವಾಗಿ ಕೈಗೊಳ್ಳಬೇಕು.
ಹಗಲು ಹೊತ್ತಿನಲ್ಲ ಮನೆಯ ಕೆಳಗಿನ ಮಹಡಿಗಳರುವುದು ಉತ್ತಮ. ಶರೀರವನ್ನು ತಣ್ಣಗಿಡಲು ಫ್ಯಾನ್ ಅಥವಾ ತೇವವಾದ ಬಟ್ಟೆಯನ್ನು ಬಳಸಬಹುದು. ಜನರು ಬಿಸಿಲಿಲ್ಲಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಹೋಗುವುದನ್ನು ತಷ್ಟಿಸಬೇಕು,ಮಧ್ಯಾಹ್ನದ ಸಂದರ್ಭದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಈ ಚಪ್ಪಲಿ ಧರಿಸದೆ ಹೊರ ಹೋಗಬಾರದು. ಹೆಚ್ಚು ಪ್ರೋಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸಬಾರದು.
ಕೆಲಸದ ಸ್ಥಳದಲ್ಲಿ ಕೆಲಸಗಾರರಿಗೆ ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು. ಕೆಲಸಗಾರರು ನೇರವಾಗಿ ಸೂರ್ಯನ ಬೆಳಕಿನಲ್ಲಿ ಕೆಲಸ ನಿರ್ವಹಿಸದೆ, ನೆರಳನಲ್ಲ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ, ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಬಹುದು. ಶ್ರಮದಾಯಕ ಹಾಗೂ ಹೊರಾಂಗಣ ಚಟುವಟಕೆಗಳನ್ನು, ತಾಪಮಾನವು ಕಡಿಮೆ ಇರುವ ಸಮಯದಲ್ಲ ಅಂದರೆ, ಬೆಳಗಿನ ಅಥವಾ ಸಂಜೆಯ ಸಮಯದಲ್ಲಿ ನಿರ್ವಹಿಸುವಂತೆ ವೇಳಾಪಟ್ಟಿಯನ್ನು ಸಿದ್ಧಗೊಳಸಬೇಕು.
ಹೊರಾಂಗಣ ಚಟುವಟಿಕೆಗಳ ಸಂದರ್ಭದಲ್ಲಿ ಕೆಲಸಗಾರರಿಗೆ, ಪ್ರತಿ 1 ಗಂಟೆಗೆ 5 ನಿಮಿಷಗಳ ಬಿಡುವನ್ನು ನೀಡಬೇಕು. ಹೆಚ್ಚುವರಿ ಕೆಲಸಗಾರನ್ನು ನೇಮಿಸಿ ಅಥವಾ ಕೆಲಸದ ಗತಿಯನ್ನು ಕಡಿಮೆಗೊಳಿಸಬಹುದು.
ಬದಲಾಗಿರುವ ಹವಾಮಾನಕ್ಕೆ ಕೆಲಸಗಾರರು ಎಲ್ಲರೂ
ಒಗ್ಗಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಬಿಸಿಯಾದ ಗಾಳಿ ಹಾಗೂ ಉಷ್ಣತೆಯ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ಗುರುತಿಸುವಂತೆ, ಕೆಲಸಗಾರರಿಗೆ ತರಬೇತಿ ನೀಡಬೇಕು. ಪ್ರಥಮ ಚಿಕಿತ್ಸೆಯನ್ನು ನೀಡಲು ತರಬೇತಿ ಹೊಂದಿರುವವರು ಲಭ್ಯವಿರಬೇಕು ಹಾಗೂ ಬಿಸಿಗಾಳಿ ಮತ್ತು ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾದ ಸಂದರ್ಭದಲ್ಲಿ ಸ್ಪಂದಿಸಲು ತುರ್ತು ಪ್ರತಿಕ್ರಿಯಾ ಯೋಜನೆಯು (emergency response plan) ಕೆಲಸದ ಸ್ಥಳದಲ್ಲಿ ಲಭ್ಯವಿರಬೇಕು. ಗರ್ಭಿಣಿಯರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ನಿಗದಿತ ಆರೋಗ್ಯ ಸಮಸ್ಯೆಗೆ ಔಷಧ ಪಡೆಯುತ್ತಿರುವವರು, ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವ ಮುನ್ನ ತಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಅಗತ್ಯವಾಗಿದೆ. ಕೆಲಸ ಮಾಡುವವರುಶಾಖದಿಂದ ರಕ್ಷಿಸಿಕೊಳ್ಳಲು ತಲೆಯ ಭಾಗವನ್ನು ಮುಚ್ಚಿಕೊಳ್ಳಬೇಕು.
ಉಷ್ಣತೆಯಿಂದ ಎದುರಾಗುವ ಆರೋಗ್ಯ ಸಮಸ್ಯೆಗಳು:
ಅತಿಯಾದ ಉಷ್ಣತೆಯಿಂದ ಸಾಧಾರಣದಿಂದ ತೀವ್ರ ಜ್ವರ,
ಕೈ-ಕಾಲುಗಳು ಹಾಗೂ ಮೊಣಕಾಲು ಸೆಳೆತ (ಸ್ನಾಯುಗಳ ಸೆಳೆತ) – ಪ್ರಜ್ಞೆ ತಪ್ಪುವುದು,ಸುಸ್ತಾಗುವುದು, ಪಾರ್ಶ್ವವಾಯು ಉಂಟಾಗುವುದು. ಹೃದ್ರೋಗ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು, ಹಾಗೂ ಕಿಡ್ನಿ ಸಮಸ್ಯೆಗಳು, ತಲೆ ಸುತ್ತುವುದು,ಅತಿಯಾದ ಬಾಯಾರಿಕೆ, ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ ಏರು ಗತಿಯ ಉಸಿರಾಟ ಹಾಗೂ ಹೃದಯ ಬಡಿತ, ದೇಹದ ಮಾಂಸ ಖಂಡಗಳಲ್ಲಿ ನೋವು, ಸೆಳೆತ ಕಂಡು ಕಂಡು ಬರುತ್ತದೆ. ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು
ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ಮತ್ತು ದ್ರವಾಹಾರವನ್ನು ಸೇವಿಸಿ, ವೈದ್ಯಕೀಯ ನೆರವನ್ನು ಪಡೆಯಬೇಕು.