*ಪಿ.ಜಿ.ಎಸ್.ಎನ್.ಪ್ರಸಾದ್.
ನಿನ್ನೆ ಮೃಗಶಿರಾ ನಕ್ಷತ್ರದ ಕೊನೆಯ ದಿನ.. ಮಧ್ಯಾಹ್ನದ ಬಳಿಕ ಕೊನೆಗೂ ಮುಂಗಾರು ಪ್ರಬಲಗೊಂಡಿತು ಅನ್ನುವ ವಾತಾವರಣ..ಸುಳ್ಯ, ಕಡಬ ತಾಲೂಕಿನ ಅನೇಕ ಕಡೆ ಭರ್ಜರಿ ಮಳೆ ಸುರಿಯಿತು. ಬಳ್ಪದಲ್ಲಿ ಗರಿಷ್ಟ 92, ಗುತ್ತಿಗಾರು-ಕಮಿಲ 78, ಎಣ್ಮೂರು 72, ಕೇನ್ಯ 69, ಹರಿಹರ-ಮಲ್ಲಾರ, ಕರಿಕ್ಕಳ ತಲಾ 65, ಕಲ್ಮಡ್ಕ 63, ಕಲ್ಲಾಜೆ 56, ಎಡಮಂಗಲ 53, ಸುಬ್ರಹ್ಮಣ್ಯ 47 ಮಿ.ಮೀ.ನಷ್ಟು ಭರ್ಜರಿ ಮಳೆ ಸುರಿದಿದೆ. ನಿನ್ನೆ ಸುಳ್ಯ ಕಡಬ ತಾಲೂಕಿನ ಸರಾಸರಿ ಮಳೆ 41 ಮಿ.ಮೀ. ವಿಚಿತ್ರ ಅಂದರೆ
ಬಳ್ಪದಲ್ಲಿ 92 ಮಿ.ಮೀ.ನಷ್ಟು ಮಳೆಯಾದರೆ ಅಲ್ಲೇ ಪಕ್ಕ ಪಟೋಳಿಯಲ್ಲಿ 32 ಮಿ.ಮೀ.ನಷ್ಟೇ ದಾಖಲಾಗಿದೆ. ಹೆಚ್ಚು ಕಡಿಮೆ ದ.ಕನ್ನಡ, ಕಾಸರಗೋಡು ಭಾಗದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಿದೆ. ಇಂದಿನಿಂದ ಆರ್ದ್ರಾ ನಕ್ಷತ್ರ ಆರಂಭ. ಕುಂಭ ದ್ರೋಣ ಮಳೆಯ ನಿರೀಕ್ಷಯಲ್ಲಿದ್ದರೆ ಬಿಸಿಲಿನ ವಾತಾವರಣ ಕಂಡು ಬಂದಿದೆ. ವರುಣ ನಾಪತ್ತೆ. ಮೃಗಶಿರಾ ನಕ್ಷತ್ರದ ಅವಧಿಯಲ್ಲಿ ಶೇಕಡಾ 63 ರಷ್ಟು ಮಳೆಯ ಕೊರತೆ ಉಂಟಾಗಿದೆ. ರೈತ ಉಳುಮೆಯ ನಿರೀಕ್ಷೆಯಲ್ಲಿದ್ದಾನೆ. ಇನ್ನೂ ಹಳ್ಳ ಕೊಳ್ಳಗಳು ತುಂಬಿಲ್ಲ. ಮಧ್ಯಾಹ್ನದ ಬಳಿಕ ಉತ್ತಮ ಮಳೆಯಾಗಿ ನಿನ್ನೆಯ ವಾತಾವರಣ ಇರುವ ಸಾಧ್ಯತೆ ಇದೆ.
ಹವಾಮಾನ ವರದಿ ಏನು..?
ಜೂನ್ 25 ರಿಂದ ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ಹಾಸನ, ಮಂಡ್ಯ ಸೇರಿ 15 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಸೂಚನೆ ನೀಡಿದೆ.