ಮುಕ್ಕೂರು : ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಮಾ.25 ರಿಂದ ಎ.2 ರ ತನಕ ಬ್ರಹ್ಮಕಲಶ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಪೆರುವಾಜೆ ಗ್ರಾಮದ ಮುಕ್ಕೂರು ವಾರ್ಡ್ ಭಕ್ತರಿಂದ ಹಸಿರುವಾಣಿ ಸಮರ್ಪಣೆ ಮಾ.25 ರಂದು ರಾತ್ರಿ ನಡೆಯಿತು. ಮುಕ್ಕೂರಿನಲ್ಲಿ
ಭಕ್ತವೃಂದದ ಸಂಚಾಲಕ ಕುಂಬ್ರ ದಯಾಕರ ಆಳ್ವ ಅವರು ತೆಂಗಿನಕಾಯಿ ಒಡೆದು ಹಸುರುವಾಣಿ ಸಮರ್ಪಣೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪೆರುವಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಭಕ್ತವೃಂದದ ಗುಡ್ಡಪ್ಪ ಗೌಡ ಅಡ್ಯತಕಂಡ, ಶ್ರೀಧರ ಗೌಡ ಕೊಂಡೆಪ್ಪಾಡಿ, ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ವಿಕಾಸ್ ರೈ ಕುಂಜಾಡಿ ಸಹಿತ ಹಲವರು ಉಪಸ್ಥಿತರಿದ್ದರು.
ಮುಕ್ಕೂರು ವಾರ್ಡ್ ನಿಂದ ಸಂಗ್ರಹಿಸಲಾದ ಅಕ್ಕಿ, ಬೆಲ್ಲ ಸಹಿತ ಸುವಸ್ತುಗಳನ್ನು ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಅರ್ಪಿಸಲಾಯಿತು. ಹೊರೆಕಾಣಿಕೆ ಸಲ್ಲಿಸಿದ ಪ್ರತಿ ಮನೆಯವರಿಗೆ ಪ್ರಮಾಣ ಪತ್ರ, ಪ್ರಸಾದ ನೀಡಿ ಗೌರವಿಸಲಾಯಿತು.
ಹಸಿರುವಾಣಿ ಸಮರ್ಪಣೆ ನಂತರ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶರವೂರು ಕ್ಷೇತ್ರದ ವತಿಯಿಂದ ಮುಕ್ಕೂರು ಭಕ್ತವೃಂದದ ಸಂಚಾಲಕ ಕುಂಬ್ರ ದಯಾಕರ ಆಳ್ವ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಹೇಮಂತ ರೈ ಮನವಳಿಕೆಗುತ್ತು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ರಾವ್ ನಗ್ರಿ ಮೊದಲಾದವರು ಉಪಸ್ಥಿತರಿದ್ದರು.










