*ಉದಯ ಶಿವಾಲ.
ಕೊಲ್ಲಮೊಗ್ರ:ಸಮಾಜಕ್ಕಾಗಿ, ನಾಡಿಗಾಗಿ, ಸಹಜೀವಿಗಳಿಗಾಗಿ ಸದಾ ಮಿಡಿಯುತ್ತಿದ್ದ ಸ್ನೇಹ ಜೀವಿ, ಅಪ್ರತಿಮ ಸಂಘಟಕ, ಸಮಾಜ ಸೇವಕ.. ಹೀಗೆ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಒಲವಿನ ಗೆಳೆಯ ಅಕಾಲದಲ್ಲಿ ಮರೆಯಾದ ಹರಿಯಣ್ಣನ ಬಗ್ಗೆ ಹೇಳಲು ಮಾತುಗಳೇ ಸಿಗುತ್ತಿತ್ತಿಲ್ಲ.. ಬರೆಯಲು ಸಾಲುಗಳೇ ಬರಿದಾಗಿದೆ.. ಕಾರಣ ಹೃದಯ ಭಾರವಾಗಿದೆ, ಕಣ್ಣುಗಳು ತೇವವಾಗಿದೆ. ಇಡಿ ನಾಡಿಗೆ ನಾಡೇ ಕಂಬನಿ ಮಿಡಿಯುತಿದೆ..!
ಸೇವೆಯೇ ಪರಮ ಧರ್ಮ ಎಂಬ ತತ್ವದಡಿ
ಬದುಕಿ,ಹಗಲಿರುಳು ಸಮಾಜದ ಹಾಗೂ ತನ್ನ ಸ್ನೇಹಿತರ, ಹಿತೈಷಿಗಳ ಒಳಿತನ್ನೇ ಬಯಸಿದ್ದ ಎಲ್ಲರ ಪ್ರೀತಿಯ ಹರಿಪ್ರಸಾದ್ ಮಲ್ಲಾಜೆ ಅವರ ಅಗಲುವಿಗೆ ಸಮಾಜಕ್ಕೆ ದೊಡ್ಡ ನಷ್ಟ. ಕುಮಾರಧಾರಾ ನದಿಯ ಒಡಲಿನ ಸೆಳೆತಕ್ಕೆ ಸಿಲುಕಿ ಉಸಿರು ಚೆಲ್ಲಿದ ಹರಿಪ್ರಸಾದ್ ಸಮಾಜ ಸೇವಕನಾಗಿ, ಸಂಘಟಕನಾಗಿ ತನ್ನನ್ನು ಗುರುತಿಸಿಕೊಂಡಿರುವುದರ ಜೊತೆಗೆ ಉದ್ಯಮಿಯಾಗಿ ಬೆಳೆಯುತ್ತಿದ್ದರು. ನನ್ನಂತಹಾ ಹಲವು ಯುವಕರಿಗೆ ಹಿರಿಯಣ್ಣನಂತಿದ್ದು ಮಾರ್ಗದರ್ಶಕರಾಗಿದ್ದರು. ಇವರ ಅಗಲಿಕೆಯಿಂದ ಇಂದು ನಾಡಿಗೆ ನಾಡೇ ಗದ್ಗದಿತವಾಗಿದೆ.
ಕೊಲ್ಲಮೊಗ್ರ ಗ್ರಾಮದ ಮಲ್ಲಾಜೆಯ ಗೋಪಾಲ ನಾಯರ್ ಮತ್ತು ಸರೋಜಿನಿ ದಂಪತಿಗಳ ಮೂವರು ಮಕ್ಕಳ ಪೈಕಿ ಇವರು ಕೊನೆಯವರು. ಇಬ್ಬರು ಸಹೋದರಿಯರ ಮುದ್ದಿನ ತಮ್ಮ. ತನ್ನ ಪರಿಶ್ರಮದಿಂದಲೇ ಬೆಳೆದು ಬಂದ ಇವರು ಕುಟುಂಬಕ್ಕೆ ಆಧಾರವಾಗಿದ್ದರು. ಹರಿಪ್ರಸಾದ್ ಅವರ ಕುಟುಂಬಕ್ಕೆ ಕೆಲವು ವರ್ಷಗಳ ಹಿಂದೆ ತಾಯಿ ಸಂರೋಜಿನಿ ಅವರ ಅಕಾಲಿಕ ಅಗಲುವಿಕೆ ದೊಡ್ಡ ನೋವು ತಂದಿತ್ತು. ಆ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಂತೆ ಇದೀಗ ಮನೆಯ ಆಧಾರಸ್ತಂಭವಾಗಿದ್ದ ಹರಿಪ್ರಸಾದ್ ಅವರ ಅಗಲುವಿಕೆ ಕುಟುಂಬಕ್ಕೆ ದೊಡ್ಡ ಆಘಾತವನ್ನೇ ನೀಡಿದೆ.
ತಾಯಿಯ ಅಗಲುವಿಕೆಯ ನಂತರ ತನ್ನ ತಂದೆಗೆ, ಕುಟುಂಬಕ್ಕೆ ಆಶಾ ಕಿರಣದಂತಿದ್ದರು. ತನ್ನ ಕೌಟುಂಬಿಕ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಉದ್ಯಮ ಕ್ಷೇತ್ರದಲ್ಲಿಯೂ ಯಶಸ್ಸಿನ ಹಾದಿಯಲ್ಲಿದ್ದರು.ಶೂನ್ಯದಿಂದ ಪ್ರಾರಂಭಿಸಿ ವ್ಯಪಾರ ವ್ಯವಹಾರವನ್ನು ಸದೃಢಗೊಳಿಸುತ್ತಾ ಬಂದಿದ್ದರು. ಬಹುಮುಖಿ ವ್ಯಕ್ತಿತ್ವದ ಹರಿಪ್ರಸಾದ್ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು. ಅವರ ಚಿಂತನೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳು ಮೂಡಿ ಬಂದಿದ್ದವು. ಸಾಮಾಜಿಕ ಕೆಲಸದ ಜೊತೆಗೆ ಧಾರ್ಮಿಕ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು.
ಕೊಲ್ಲಮೊಗ್ರದ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಒಗ್ಗೂಡಿಸಲು ನಿರಂತರ ಪ್ರಯತ್ನಿಸಿದ್ದರು. ಕೊಲ್ಲಮೊಗ್ರ ಅಯ್ಯಪ್ಪ ಸ್ವಾಮಿ ಪೂಜಾ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಸುಬ್ರಹ್ಮಣ್ಯ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರಾಗಿ ದುಡಿದಿದ್ದರು.
ಅಲ್ಲದೆ ಗೆಳೆಯರ ಬಳಗ ಮಲ್ಲಾಜೆ’ಯ ಸಕ್ರಿಯ ಸದಸ್ಯರಾಗಿ ಹಿರಿಯ-ಕಿರಿಯರೆನ್ನದೆ ಎಲ್ಲರನ್ನೂ ಪ್ರೀತಿಯಿಂದ ನಡೆಸಿಕೊಳ್ಳುವ ಗುಣ ಹೊಂದಿದ್ದರು.
ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳಲ್ಲಿ ಉತ್ತಮ ಸಂಘಟಕರಾಗಿ ಗುರುತಿಸಿಕೊಂಡಿದ್ದರು. ಗ್ರಾಮದ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದರು, ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದರು.ಸುಬ್ರಹ್ಮಣ್ಯ ಮತ್ತು ಹರಿಹರದಲ್ಲಿ ‘ಅನುಗ್ರಹ ಹಾರ್ಡ್ವೇರ್’ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದರು. ತನ್ನ ಆದಾಯದ ಒಂದಂಶವನ್ನು ಸಹಾಯ, ದಾನದ ಮೂಲಕ ಸಮಾಜಕ್ಕೆ ನೀಡುತ್ತಿದ್ದರು.
ಪ್ರೀತಿಯ ಹರಿಯಣ್ಣ ಮಿತ್ರರಿಗೆ, ಕುಟುಂಬಕ್ಕೆ ನೀವು ಇಂದು ಮರೆಯಲಾಗದ ನೋವಾಗಿದ್ದೀರಿ, ಪ್ರೀತಿಯ ನೆನಪಾಗಿದ್ದೀರಿ.. ಸಮಾಜಕ್ಕೆ ಹಾಗೂ ನಿಮ್ಮ ಕೊಡುಗೆ ಮಾತ್ರ ಅಮರವಾಗಿದೆ. ನೀವು ಕಂಡ ಕನಸು,ನಿಮ್ಮ ಕಲ್ಪನೆ ಎಲ್ಲವೂ ಸಕಾರಗೊಳಿಸಲು ಮಿತ್ರರಾದ ನಾವು ಸದಾ ಶ್ರಮಿಸುತ್ತೇವೆ..
ಮತ್ತೆ ಹುಟ್ಟಿ ಬನ್ನಿ..!












