ಸುಳ್ಯ:ಸರಳ,ಸಜ್ಜನಿಕೆಯ ವ್ಯಕ್ತಿತ್ವದ, ಮೃದು ಮಾತಿನ ಮತ್ತು ತಾಳ್ಮೆಯ ಸ್ವಭಾವದ ಮೂಲಕ ಸುಳ್ಯದ ಜನರ ಹೃದಯ ಗೆದ್ದ ಅಧಿಕಾರಿ, ಸುಳ್ಯದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ. ಹನಮಂತರಾಯಪ್ಪ ಮೇ.31ರಂದು ಸೇವಾ ನಿವೃತ್ತಿ ಪಡೆಯಲಿದ್ದಾರೆ. ಸುದೀರ್ಘ 39 ವರ್ಷಗಳ ಸರಕಾರಿ ಸೇವೆಗೆ ಅವರು ಇಂದು ವಿದಾಯ ಹೇಳಲಿದ್ದಾರೆ. ಅದರಲ್ಲಿ 2006 ರಿಂದ
ಸುಮಾರು 16 ವರ್ಷಗಳಿಗೂ ಹೆಚ್ಚು ವರ್ಷ ಸುಳ್ಯದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಳ್ಯದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ ಅಧಿಕಾರಿಗಳ ಸಾಲಿಗೆ ಅವರು ಸೇರಿದ್ದಾರೆ.
ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಶಿಕ್ಷಣ ಮುಗಿಸಿದ ಬಳಿಕ ಹನುಮಂತರಾಯಪ್ಪ ಅವರು 1984ರಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಸರಕಾರಿ ಸೇವೆಗೆ ಸೇರಿದರು.
1984ರಿಂದ ಸುಮಾರು 22 ವರ್ಷಗಳ ಕಾಲ ಶಿರಾ ತಾಲೂಕಿನಲ್ಲಿ ಸೇವೆ ಸಲ್ಲಿಸಿದರು. 2006ರಲ್ಲಿ ಸಹಾಯಕ ಇಂಜಿನಿಯರ್ ಆಗಿ ಪದೋನ್ನತಿಗೊಂಡ ಇವರು ಸುಳ್ಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗಕ್ಕೆ ಬಂದರು. 2018ರಲ್ಲಿ ಸುಳ್ಯದಲ್ಲಿರುವಾಗಲೇ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಮುಂಭಡ್ತಿಗೊಂಡು ಸುಳ್ಯದಲ್ಲಿಯೇ ಮುಂದುವರಿದರು. 2022ರಲ್ಲಿ ಅವರಿಗೆ ಮಂಗಳೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ವರ್ಗಾವಣೆಯಾಯಿತು. ಜತೆಗೆ ಸುಳ್ಯದ ಹೆಚ್ಚುವರಿ ಪ್ರಭಾರದವನ್ನು ವಹಿಸಲಾಯಿತು. 2006ರಿಂದ 2023ರವರೆಗೆ 17 ವರ್ಷದಲ್ಲಿ ಒಂದು ವರ್ಷಗಳ ಕಾಲ ಮಾತ್ರ ಬೇರೆಡೆ ಸೇವೆ ಸಲ್ಲಿಸಿದ್ದರು.16 ವರ್ಷಕ್ಕೂ ಹೆಚ್ಚು ಸಮಯ ಸುಳ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.
ಹನುಮಂತರಾಯಪ್ಪರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರು. ಪತ್ನಿ ರತ್ನಮ್ಮ ಗೃಹಿಣಿಯಾಗಿದ್ದಾರೆ. ಇಬ್ಬರು ಪುತ್ರರಾದ ಡಾ.ಹೆಚ್.ಕಿರಣ್, ಡಾ.ಹೆಚ್. ಕಿಶೋರ್ ಬೆಂಗಳೂರಿನಲ್ಲಿ ವೈದ್ಯರಾಗಿದ್ದಾರೆ. ಇಬ್ಬರೂ ಪುತ್ರರ ಪತ್ನಿಯರೂ ವೈದ್ಯರಾಗಿದ್ದಾರೆ.