ಸುಳ್ಯ: ಪುತ್ತೂರು ತಾಲೂಕಿನ ಈಶ್ವರ ಮಂಗಲ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಏ.9 ರಿಂದ 12 ರ ತನಕ ನಡೆಯಲಿದೆ ಎಂದು ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶ್ರೀ ಕೋಟಿ ರಾಮ ತಾರಕ ಮಹಾಯಜ್ಞ, ರಾಮ ಜನ್ಮಭೂಮಿ ಅಯೋಧ್ಯೆಯಿಂದ
ಹೊರಟು ಅಂಜನಾದ್ರಿ ಮೂಲಕ ಹನುಮಗಿರಿಗೆ ಆಗಮಿಸುವ ರಾಮಹನುಮ ಜ್ಯೋತಿ ರಥಯಾತ್ರೆ, ಲಕ್ಷೋತ್ತರ ನಾರಿಕೇಳ ಸಮರ್ಪಣೆ, ಭಜನಾ ಸಂಕೀರ್ತನ ಯಾತ್ರೆ ನಡೆಯಲಿದೆ. ಮನೆಮನೆಗಳ ಶ್ರೀರಾಮ ತಾರಕ ಮಂತ್ರ ಜಪದೊಂದಿಗೆ ಕ್ಷೇತ್ರದಲ್ಲಿ ಮಹಾಯಜ್ಞ ನಡೆಯಲಿದೆ.
ಕೋಟಿ ಶ್ರೀ ರಾಮ ತಾರಕ ಜಪ ಯಜ್ಞದಲ್ಲಿ ಪಾಲ್ಗೊಳ್ಳುವವರಿಗೆ ಕ್ಷೇತ್ರದಲ್ಲಿ ರಾಮಜಪ ದೀಕ್ಷೆಯನ್ನು ನೀಡಲಾಗುತ್ತಿದೆ.ರಾಮ ದೀಕ್ಷೆಯನ್ನು ಪಡೆದವರಿಗೆ ಕೋಟಿ ಶ್ರೀರಾಮ ತಾರಕ ಮಹಾಯಜ್ಞಾನದ ಸಂದರ್ಭದಲ್ಲಿ ಅಯೋಧ್ಯೆಯ ಪುಣ್ಯ ಮೃತ್ತಿಕೆ (ಮಣ್ಣು) ಮತ್ತು ಪ್ರಸಾದ ರೂಪದಲ್ಲಿ ಗಂಗಾಜಲವನ್ನು ನೀಡಲಾಗುತ್ತದೆ. ಶ್ರೀ ರಾಮನಿಗೆ ಮತ್ತು ಹನುಮನಿಗೆ ಲಕ್ಷೋತ್ತರ ನಾರಿಕೇಳಗಳು ಸಮರ್ಪಣೆಯಾಗಬೇಕು ಎಂಬ ಉದ್ದೇಶದಿಂದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಲಕ್ಷೋತ್ತರ ನಾರಿಕೇಳ ಸಮರ್ಪಣ ಯಜ್ಞವನ್ನು ಕೈಗೊಳ್ಳಲಾಗಿದೆ. ರಾಮನಿಗೆ ಒಂದು ಹನುಮನಿಗೆ ಒಂದು ನಾರಿಕೇಳವನ್ನು (2 ಸುಲಿಯದ ತೆಂಗಿನಕಾಯಿ) ಸಮರ್ಪಿಸಬೇಕು ಎಂಬುದು

ದೇವಾಲಯದ ಅಭಿಲಾಷೆ ಎಂದರು.ಹನುಮಗಿರಿ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅಯೋಧ್ಯೆಯ ಮಂದಿರದಲ್ಲಿ ಬೆಳಗುವ ಜ್ಯೋತಿಯು ನಮ್ಮ ಗ್ರಾಮಕ್ಕೆ ಆಗಮಿಸುತ್ತಿದೆ.ಅಯೋಧ್ಯೆಯಿಂದ ಹೊರಟ ಜ್ಯೋತಿಯು ಶ್ರೀ ರಾಮನ ಪರಮ ಭಕ್ತ ಆಂಜನೇಯ ಹುಟ್ಟಿರುವ ಅಂಜನಾದ್ರಿಗೆ ಬಂದು ಅಲ್ಲಿನ ಜ್ಯೋತಿಯನ್ನು ಸ್ಪರ್ಶಿಸಿ ನಮ್ಮ ಗ್ರಾಮಗಳಿಗೆ ಆಗಮಿಸುತ್ತದೆ. ಈ ಪುಣ್ಯ ಜ್ಯೋತಿಯನ್ನು ನಮ್ಮ ಮನೆಮನೆಗೂ ಕೊಂಡೊಯ್ದು ಬೆಳಗಿಸಿ ರಾಮ ಹನುಮರ ಅನುಗ್ರಹಕ್ಕೆ ಪಾತ್ರರಾಗಬೇಕು. ಈ ಜ್ಯೋತಿ ದಿನಾಂಕ ಏಪ್ರಿಲ್ 09 ರಂದು ಕ್ಷೇತ್ರಕ್ಕೆ ಆಗಮಿಸಿ ಇದರಿಂದ ಕೋಟಿ ಶ್ರೀ ರಾಮ ತಾರಕ ಯಜ್ಞ ಆರಂಭವಾಗುತ್ತದೆ. 60 ಗ್ರಾಮ ಸಮಿತಿಗಳ ಗ್ರಾಮ ದೇವಾಲಯಕ್ಕೆ ಅಥವಾ ಇತರ ಭಜನಾ ಮಂದಿರಗಳಿಗೆ ಅಯೋಧ್ಯೆಯ ರಾಮ ಜ್ಯೋತಿ ಜೊತೆ ರಾಮಹನುಮ ರಥ ಆಗಮಿಸುತ್ತದೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಪ್ರತಿ ಗ್ರಾಮದ ಭಕ್ತರಿಗೂ ಭಜನೆಯನ್ನು ಮಾಡುವ ಅವಕಾಶವನ್ನು ಒದಗಿಸಿದ್ದು ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 9ಯವರೆಗೆ ಭಜನಾ ಸೇವೆಗಳನ್ನು ನೀಡಬಹುದು.ಬ್ರಹ್ಮಕಲಶೋತ್ಸವದ ನಾಲ್ಕು ದಿನಗಳು ಕೂಡ ವಿಶೇಷ ರಾಜ್ಯ ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ.
ಏ.8ರಂದು ಪುತ್ತೂರಿನಿಂದ ಹೊರಟ ಭವ್ಯ ಹೊರೆ ಕಾಣಿಕೆ ಕ್ಷೇತ್ರವನ್ನು ತಲುಪುತ್ತದೆ. ಏ.9ರಂದು ಬ್ರಹ್ಮಕಲಶೋತ್ಸವದ ಕಾರ್ಯಗಳು ಆರಂಭವಾಗುತ್ತದೆ, ಏ.10ರಂದು ನೂರು ವೈದಿಕರಿಂದ ಕ್ಷೇತ್ರದಲ್ಲಿ ರಾಮ ತಾರಕ ಜಪ ಆರಂಭವಾಗುತ್ತದೆ.12ರಂದು ಬೆಳಗ್ಗೆ 8:20 ರಿಂದ 10.20ರ ವೃಷಭ ಲಗ್ನ ಸುಮೂರ್ತದಲ್ಲಿ ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ದೇವರಿಗೆ ಏಕಕಾಲದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು. 60 ಗ್ರಾಮ ಸಮಿತಿಗಳನ್ನು ಮಾಡಲಾಗಿದ್ದು ಎಲ್ಲಾ ಗ್ರಾಮದಲ್ಲೂ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ, ನಾಲ್ಕು ವಿವಿಧ ಕಾರ್ಯಕ್ರಮಗಳ ಸಂಚಾಲಕ ಮತ್ತು ಸಹ ಸಂಚಾಲಕರನ್ನು ನೇಮಿಸಲಾಗಿದೆ.
ಬ್ರಹ್ಮಕಲಶೋತ್ಸವಕ್ಕೆ ರಾಜ್ಯ ರಾಷ್ಟ್ರಮಟ್ಟದ ವಿವಿಧ ಸ್ವಾಮೀಜಿಗಳು, ರಾಜಕಾರಣಿಗಳು, ರಾಜಮಹಾರಾಜರು, ಗಣ್ಯಾತಿಗಣ್ಯರು ಆಗಮಿಸುತ್ತಾರೆ. ಕಾಂಚಿ ಗುರುಪೀಠದ ಸ್ವಾಮಿಗಳು ಹನುಮಗಿರಿಯ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹನುಮಗಿರಿ ಬ್ರಹ್ಮ ಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿ ನಹುಷ ಪಳನೀರು, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಎನ್.ಎ.ರಾಮಚಂದ್ರ, ಸಂತೋಷ್ ಜಾಕೆ, ಸತೀಶ್ ಎಡಮಲೆ, ಗೋಪಾಲಕೃಷ್ಣ ಕುತ್ಯಾಳ, ಜಯರಾಮ ರೈ ಜಾಲ್ಸೂರು, ಸುನಿಲ್ ಕೇರ್ಪಳ, ಚಂದ್ರಶೇಖರ ನೆಡಿಲು, ರೋಹಿತ್ ಕುಮಾರ್ ಕುದ್ಕುಳಿ, ಮಹೇಶ್ ಜಬಳೆ ಉಪಸ್ಥಿತರಿದ್ದರು.














