ಸುಳ್ಯ:ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇದರ 2023-24 ನೇ ಸಾಲಿನ ವಿಸ್ತರಣಾ ಘಟಕಗಳ ಬಲಪಡಿಸುವಿಕೆ ಯೋಜನೆ ಅಡಿಯಲ್ಲಿ ಹಾಲು ಕರೆಯುವ ಸ್ಪರ್ಧೆ (ಅತಿ ಹೆಚ್ಚು ಹಾಲು ಉತ್ಪಾದಿಸುತ್ತಿರುವ ಜಾನುವಾರುಗಳನ್ನು ಗುರುತಿಸಿ ಅವುಗಳ ಮಾಲಕರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ) ಜ.31ರಂದು ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ನಡೆದ ಈ ಕಾರ್ಯಕ್ರಮದಲ್ಲಿ
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪುತ್ತೂರು ಪ್ರಾದೇಶಿಕ ಕಚೇರಿ, ಮಹತೋಭಾರ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸುಬ್ರಮಣ್ಯ, ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಹಾಲು ಉತ್ಪಾದಕರ ಸಹಕಾರ ಸಂಘಗಳಾದ ಮುರುಳ್ಯ ಎಡಮಂಗಲ ಪಡ್ಪಿನಂಗಡಿ ಮಾನ್ಯಡ್ಕ ಮತ್ತು ಮದ್ಕೂರು, ಲ್ಯಾಂಪ್ ಸೊಸೈಟಿ ಸುಳ್ಯ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುಳ್ಯ ಸಂಸ್ಥೆಗಳು ಭಾಗವಹಿಸಿದ್ದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಡಮಂಡಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಹೈನುಗಾರಿಕೆ ಕಡಿಮೆ ಯಾಗುತ್ತಿರುವಂತಹ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ರೈತರು ಆರ್ಥಿಕ ಸಂಕಷ್ಟಗಳಿಂದ ಪಾರಾಗುವುದು ಸುಲಭ. ಇಂತಹ ಕಾರ್ಯಕ್ರಮಗಳಿಂದ ಇನ್ನೂ ಹೆಚ್ಚಿನ ರೈತರು ಹೈನುಗಾರಿಕೆಯ ಕಡೆಗೆ ಒಲವು ತೋರುವವಂತಾಗಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ನಿರ್ದೇಶಕರಾದ ನಾರಾಯಣ ಪ್ರಕಾಶ್, ದಕ್ಷಿಣ ಕನ್ನಡ ಪಶುಪಾಲನೆ ಇಲಾಖೆಯ ಉಪನಿರ್ದೇಶಕರಾದ ಡಾ. ಅರುಣ್ ಕುಮಾರ್ ಶೆಟ್ಟಿ, ದ ಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್ ಡಿ, ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕುಸುಮಾವತಿ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಎಡಮಂಗಲ ಗ್ರಾಮದ ಒಟ್ಟು 34 ರೈತರು ಭಾಗವಹಿಸಿದ್ದು. ಹಾಲು ಕರೆಯುವ ಸ್ಪರ್ಧೆಯಲ್ಲಿ ಶಿವರಾಮ ಸಿ. ಚಾಮೇತಡ್ಕ ಇವರ ಹಸುಗಳು 28.02ಲೀ ಮತ್ತು 24.88ಲೀ ಹಾಲು ಉತ್ಪಾದಿಸುವುದರೊಂದಿಗೆ ಪ್ರಥಮ (2ಗ್ರಾಂ ಚಿನ್ನದ ಪದಕ) ಮತ್ತು ದ್ವಿತೀಯ (1ಗ್ರಾಂ ಚಿನ್ನದ ಪದಕ) ಸ್ಥಾನಗಳನ್ನು ಪಡೆದುಕೊಂಡವು. ಎಡಮಂಗಲ ಗ್ರಾಮದ ಪೊಯ್ಯತ್ತೂರು ಕರುಣಾಕರ ರೈ ರವರ ಹಸು 20.62 ಲೀ ಹಾಲು ಉತ್ಪಾದಿಸುವುದರೊಂದಿಗೆ ತೃತೀಯ (1/2ಗ್ರಾಂ ಚಿನ್ನದ ಪದಕ) ಸ್ಥಾನವನ್ನು ಪಡೆದುಕೊಂಡಿತು. ವೇದಾವತಿ ಮಾಲೆಂಗ್ರಿ (20.01ಲೀ) ಮತ್ತು
ಜುರಾಬಿ (18.80 ಲೀ) ರವರ ಹಸುಗಳು 4ನೇ ಮತ್ತು 5ನೇ ಸ್ಥಾನವನ್ನು ಗಳಿಸಿ 1/4 ಗ್ರಾಂ ಚಿನ್ನದ ಪದಕಗಳನ್ನು ಪಡೆದುಕೊಂಡವು. ವ್ಯಾಪ್ತಿಯ ಹತ್ತು ಜನ ರೈತರಿಗೆ ಬೆಳ್ಳಿಯ ನಾಣ್ಯಗಳನ್ನು, ಪ್ರಶಸ್ತಿಪತ್ರ ಮತ್ತು ಪೋಷಕಾಂಶ ಭರಿತ ಪಶು ಆಹಾರದ ಕಿಟ್ಟುಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಮಿಶ್ರತಳಿ ಕರು ಪ್ರದರ್ಶನದಲ್ಲಿ 86 ಅತ್ಯುತ್ತಮ ತಳಿಯ ಕರುಗಳನ್ನು ಪ್ರದರ್ಶಿಸಲಾಯಿತು. ಕರು ಪ್ರದರ್ಶನದಲ್ಲಿ ಭಾಗವಹಿಸಿದ ಅತ್ಯಂತ ಉತ್ತಮವಾದ ಐದು ಕರುಗಳಿಗೆ ಬೆಳ್ಳಿಯ ನಾಣ್ಯಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
520ಕ್ಕೂ ಹೆಚ್ಚಿನ ಸಂಖ್ಯೆಯ ಹೈನುಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ಕಾರ್ಯಕ್ರಮದಲ್ಲಿ ಪಶುಪಾಲನೆ ಇಲಾಖೆ ಸುಳ್ಯ, ದಕ್ಷಿಣ ಕನ್ನಡ ಹಾಲು ಒಕ್ಕೂಟ, ಮಿಲ್ಕ್ ಮಾಸ್ಟರ್, ಕೆನರಾ ಬ್ಯಾಂಕ್, ಗೋಲಕ್ಷ್ಮಿ ಫೀಡ್ಸ್, ಮತ್ತಿತರ ಪಶು ಔಷಧಿ ತಯಾರಿಕಾ ಸಂಸ್ಥೆಗಳ ಆಕರ್ಷಕ ಮಳಿಗೆಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ಉಸ್ತುವಾರಿಯನ್ನು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯದ ಮುಖ್ಯ ಪಶುವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ಕೆ. ವಹಿಸಿಕೊಂಡಿದ್ದರು. ಇಲಾಖೆಯ ಅಧಿಕಾರಿಗಳಾದ ಡಾ. ಸೂರ್ಯನಾರಾಯಣ, ಡಾ. ವೆಂಕಟಾಚಲಪತಿ, ಡಾ ಮೇಘಶ್ರೀ, ಡಾ ಅಜಿತ್ ಎಂಸಿ, ಡಾ. ಮಲ್ಲಿಕಾ. ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಸತೀಶ್ ರಾವ್ ಡಾ ಚರಣ್ ಡಿ.ಜೆ. ಡಾ ಸಚಿನ್, ವಿಸ್ತರಣಾಧಿಕಾರಿಗಳಾದ ಹರೀಶ್, ಇಲಾಖೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ ಶೆಟ್ಟಿ, ಸಹ ಸಿಬ್ಬಂದಿಗಳಾದ ರೋಹಿತ್, ಶ ನವೀನ ಡಿ.ಯಸ್. ಧರ್ಮಾವತಿ, ಯೋಗಿತಾ, ವಿನೋದ್, ಹರೀಶ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಾದ ಅಕ್ಷತಾ ಮತ್ತು ಮಾಧವ, ತೀರ್ಥ ಕುಮಾರಿ, ಕೃತಕ ಗರ್ಭಧಾರಣೆ ಕಾರ್ಯಕರ್ತರಾದ ಲಕ್ಷ್ಮೀಶ ಮತ್ತು ಹರಿಯಪ್ಪ ಹಾಗೂ ಸಿಬ್ಬಂದಿಗಳು ಸ್ಥಳೀಯ ಹೈನುಗಾರರು ಸಕ್ರಿಯವಾಗಿ ಭಾಗವಹಿಸಿದ್ದರು.








