ಸುಳ್ಯ: ಕಳೆದ ತಿಂಗಳು ಬೇಸಿಗೆಯಲ್ಲಿ ಮಾಡಿದ ಡಾಮರೀಕರಣ ಮೊದಲ ಮಳೆ ಬೀಳುತ್ತಿದ್ದಂತೆ ಢಮಾರ್ ಆಗಿದೆ. ಡಾಮರೀಕರಣ ಮಾಡಿ ಸುಂದರವಾಗಿದ್ದ ರಸ್ತೆ ಒಂದು ತಿಂಗಳಲ್ಲಿ ಎಕ್ಕುಟ್ಟಿ ಹೋಗಿದ್ದು ಭಾರೀ ಗಾತ್ರದ ಹೊಂಡ ಗುಂಡಿ ನಿರ್ಮಾಣ ಆಗಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿ ಹಳೆಗೇಟಿನಿಂದ ಜಯನಗರ, ಕೊಡಿಯಾಲಬೈಲು ಸಂಪರ್ಕ ಕಲ್ಪಿಸುವ
ಬಹು ಉಪಯೋಗಿ ರಸ್ತೆಯಲ್ಲಿ ಮಿಲಿಟರಿ ಗ್ರೌಂಡ್ ಸಮೀಪ ಹೊಸಗದ್ದೆ ಬಳಿ ಈ ಆವಾಂತದರ ಉಂಟಾಗಿದೆ. ಹಳಿಗೇಟಿನಿಂದ ಹೊಸ ಗದ್ದೆ ಕಟ್ಟೆ ಸಮೀಪದದವರೆಗೆ ರಸ್ತೆ ಕಾಂಕ್ರೀಟೀಕರಣ ಗೊಂಡಿದೆ. ಕಾಂಕ್ರಿಟೀಕರಣದ ಬಳಿಕ ಡಾಮರು ರಸ್ತೆ ಆರಂಭಗೊಳ್ಳುವ ಸ್ಥಳದಲ್ಲಿ ಮಾಡಿದ ಡಾಮರೀಕರಣ ಒಂದು ತಿಂಗಳಲ್ಲಿ ಎಕ್ಕುಟ್ಟಿ ಹೋಗಿದ್ದು ದೊಡ್ಡ ಹೊಂಡ ನಿರ್ಮಾಣವಾಗಿ ಕೆಸರು ನೀರು ತುಂಬಿ ಪ್ರಯಾಣಕ್ಕೆ ಸಂಚಕಾರ ತಂದಿದೆ.
ಹಳೆಗೇಟಿನಿಂದ ಬರುವ ರಸ್ತೆ ಹೊಸಗದ್ದೆ ಕಟ್ಟೆ ಬಳಿಯಿಂದ ಒಂದು ರಸ್ತೆ ಜಯನಗರ ಕಡೆಗೆ, ಇನ್ನೊಂದು ಕೊಡಿಯಾಲಬೈಲು ಕಡೆಗೆ ಹೋಗುತ್ತದೆ. ದಿನಾಲು ನೂರಾರು ವಾಹನಗಳು ಓಡಾಡುವ, ಸಾವಿರಾರು ಜನರು ಪ್ರಯಾಣಿಸುವ ಬಹು ಉಪಯೋಗಿ ರಸ್ತೆ. ಈ ರಸ್ತೆಯಲ್ಲಿ ಕಟ್ಟೆ ಬಳಿ ಹೊಂಡ ಗುಂಡಿ ಮಾಮೂಲಿಯಾಗಿತ್ತು. ಜನರ ವರ್ಷದ ಬೇಡಿಕೆಯ ಬಳಿಕ ಕಳೆದ ತಿಂಗಳು ಇಲ್ಲಿ ಡಾಮರೀಕರಣ ನಡೆದಿತ್ತು. ಆದರೆ ಜನರ ಪ್ರಯಾಣದ ನಿರೀಕ್ಷೆಗೆ ತಣ್ಣೀರೆರೆಚಿ ಮಳೆ ಬೀಳುತ್ತಿದ್ದಂತೆ ಡಾಮರೀಕರಣದ ಹೊಸತನ ಮಾಸುವ ಮುನ್ನವೇ ಡಾಮರು ಸಂಪೂರ್ಣ ಎದ್ದು ಹೋಗಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದೆ. ಕೇವಲ ಒಂದು ತಿಂಗಳಲ್ಲಿ, ಮಳೆಯ ಹನಿ ಬೀಳುತ್ತಿದ್ದಂತೆ ರಸ್ತೆ ಢಮಾರ್ ಆಗಿ ಡಾಮರು ಮಾಯವಾಗಿರುವುದು ಇದೆಂತಾ ಮಾಯೆ… ಎಂದು ಪ್ರಯಾಣಿಕರು ಪ್ರಶ್ನಿಸುವಂತಾಗಿದೆ.