ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಕೊಡಗು ಜಿಲ್ಲಾ ಹಾಪ್ಕಾಮ್ಸ್ ವತಿಯಿಂದ ನಗರದ ಕೊಡಗು ಜಿಲ್ಲಾ ಹಾಪ್ಕಾಮ್ಸ್ ಆವರಣದಲ್ಲಿ ಮೇ 28ರ ವರೆಗೆ ಏರ್ಪಡಿಸಲಾಗಿರುವ ‘ಮಾವು ಮತ್ತು ಹಲಸು ಮೇಳ’ಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಶುಕ್ರವಾರ ಚಾಲನೆ ನೀಡಿದರು. ನಗರದ ಹಾಪ್ಕಾಮ್ಸ್ ಆವರಣದಲ್ಲಿ ಏರ್ಪಡಿಸಲಾಗಿರುವ ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ ನೀಡಿ
ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾವು ಮತ್ತು ಹಲಸು ಮೇಳದಿಂದ ರೈತರು ನೇರವಾಗಿ ತಾವು ಉತ್ಪಾದಿಸಿದ ಬೆಳೆಯನ್ನು ಮಾರಾಟ ಮಾಡಲು ಅನುಕೂಲವಾಗಿದೆ. ಜೊತೆಗೆ ಗ್ರಾಹಕರಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು. ಮಾವು ಮತ್ತು ಹಲಸು ಮೇಳದಿಂದ ರೈತರನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಸಹಕಾರಿಯಾಗಿದೆ. ಜಿಲ್ಲಾಡಳಿತ ಉತ್ತಮ ಕೆಲಸ ಕೈಗೊಂಡಿದೆ ಎಂದು ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಮಾವು ಮತ್ತು ಹಲಸು ಮೇಳದಲ್ಲಿ 25 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ರಾಮನಗರ ಜಿಲ್ಲೆಯಿಂದ ಹೆಚ್ಚಿನ ಮಾವು ಬೆಳೆಗಾರರು ಆಗಮಿಸಿದ್ದಾರೆ. ರುಚಿಯಾದ ಮಾವು ಮತ್ತು ಹಲಸು ಹಣ್ಣನ್ನು ಗ್ರಾಹಕರು ಸವಿಯುವಂತಾಗಬೇಕು. ಮೇಳದಿಂದ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಿದೆ ಎಂದು ಹೇಳಿದರು. ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಎಚ್.ಆರ್.ನಾಯಕ್, ಹಿರಿಯ ಸಹಾಯಕ ನಿರ್ದೇಶಕರಾದ ಸಿ.ಎಂ.ಪ್ರಮೋದ್ ಅವರು ವಿವಿಧ ರೀತಿಯ ಮಾವು ಮತ್ತು ಹಲಸು ಬಗ್ಗೆ ಮಾಹಿತಿ ನೀಡಿದರು.
ಮಾವು ಮತ್ತು ಹಲಸು ಮೇಳದಲ್ಲಿ ಬಾದಾಮಿ, ರಸಪುರಿ, ಸಿಂಧೂರ, ತೋತಾಪುರಿ, ದಾಶೇರಿ, ನೀಲಂ, ರುಮಾನಿ, ಅಮ್ರಪಾಲಿ, ಕೊಡಗಿನ ಕಾಡು ಮಾವು, ಮಲ್ಗೋವ, ಮಲ್ಲಿಕಾ, ಬಂಗಿನಪಲ್ಲಿ, ಸಕ್ಕರೆ ಗುತ್ತಿ, ಕಲ್ಕತ್ತಾ ಗೋಲ್ಡ್, ಕೇಸರ್, ವಾಲಜ, ಇಮಾಮ್ ಪಸಂದ್, ಮುಂದ, ಕಾಲಪಾಡಿ, ಹೀಗೆ ಹದಿನೈದಕ್ಕೂ ಹೆಚ್ಚು ರೀತಿಯ ಮಾವಿನ ಹಣ್ಣುಗಳು ಮಾವು ಮೇಳದಲ್ಲಿ ಕಂಡು ಬಂದವು.
ಹಾಗೆಯೇ ಪಿಂಗಾರ ತೋಟಗಾರಿಕಾ ಫಾಮ್ರ್ಸ್ ಪ್ರೊಡ್ಯೂಷನ್ ವತಿಯಿಂದ ಹಲಸಿನಕಾಯಿ ಹಪ್ಪಳ, ಚಿಪ್ಸ್, ಹಲ್ವ, ಸುಕೇಲಿ, ಹಲಸಿನಕಾಯಿ ಬೀಜದ ಬಿಸ್ಕೇಟ್, ಬಾಳೆಹಣ್ಣಿನ ಹಪ್ಪಳ, ಬಾಳೆ ಹಣ್ಣಿನ ಹಪ್ಪಳ, ಪಲ್ಫ್ ಮತ್ತಿತರ ಹಲಸು ಮತ್ತು ಬಾಳೆ ಹಣ್ಣಿನ ತಿಂಡಿ ತಿನಿಸುಗಳು ಮೇಳದಲ್ಲಿ ಇತ್ತು.
ಪುತ್ತೂರಿನ ತೋಟಗಾರಿಕಾ ಇಲಾಖೆ ವತಿಯಿಂದ ವಿವಿಧ ಜಾತಿಯ ಮಾವಿನ ತಳಿಗಳಾದ ಮಲ್ಲಿಕಾ, ಕೇಸರ್, ಕಾಳಪಾಡಿ, ಮತ್ತಿತರ ಮಾವಿನ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತರಿಗೆ ಸಾವಯವ ಕೃಷಿ ದೃಢೀಕರಣ ನೀಡುವ ಸಂಸ್ಥೆ ವತಿಯಿಂದ ಬೆಲ್ಲದ ಪುಡಿ ಹಾಗೂ ಅಚ್ಚು ಬೆಲ್ಲವನ್ನು ಮಾರಾಟ ಮಾಡಲಾಗುತ್ತಿದೆ.
ವಿಧಾನಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಮಡಿಕೇರಿ ನಗರಸಭಾಧ್ಯಕ್ಷರಾದ ಅನಿತಾ ಪೂವಯ್ಯ, ಹಾಪ್ ಕಾಮ್ಸ್ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಹಾಪ್ಕಾಮ್ಸ್ ಉಪಾಧ್ಯಕ್ಷರಾದ ಮಲ್ಲಂಡ ಮಧುದೇವಯ್ಯ, ನಿರ್ದೇಶಕರಾದ ನಾಗೇಶ್ ಕುಂದಲ್ಪಾಡಿ, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಲೀಲಾ ಮೇದಪ್ಪ, ಕೊನೇರಿರ ಎಂ.ಮನೋಹರ್, ಸುವಿನ್ ಗಣಪತಿ, ಮಹೇಶ್, ಕಾಂಗೀರ ಸತೀಶ್, ಇತರರು ಇದ್ದರು.