ಸುಳ್ಯ:ನಮ್ಮ ಅಸ್ಮಿತೆ, ಏಕತೆಯನ್ನು ನಾಶ ಮಾಡುವ ಪ್ರಯತ್ನ ಮತ್ತು ಶ್ರದ್ಧಾಕೇಂದ್ರಗಳ ಮೇಲಿನ ಅಪಪ್ರಚಾರ, ಅವಮಾನ ನಿರಂತರ ನಡೆಯುತ್ತಿದೆ, ಇದರ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗ ಸುಳ್ಯ ತಾಲೂಕು ಇದರ ವತಿಯಿಂದ
ಸುಳ್ಯದ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ
ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಶತಮಾನಗಳಿಂದ ಎಷ್ಟೇ ದಾಳಿ ನಡೆದರೂ ಸನಾತನ ಹಿಂದೂ ಸಂಸ್ಕೃತಿಯನ್ನು ನಾಶಪಡಿಸಲು ಸಾಧ್ಯವಿಲ್ಲ. ಆದರೆ ಯಾವುದೇ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ನಮ್ಮ ಬೌದ್ಧಿಕ ಶಕ್ತಿ ಮತ್ತು ಭಾವನೆಗಳು ದುರ್ಬಲಗೊಳ್ಳಬಾರದು. ನಮ್ಮ ಶ್ರದ್ಧಾ ಕೇಂದ್ರಗಳ ಮೇಲಿನ ಶ್ರದ್ಧೆ ಮತ್ತು ಭಕ್ತಿ ಅಚಲವಾಗಿರಬೇಕು ಎಂದು ಅವರು ಹೇಳಿದರು.
ನಮ್ಮ ಪರಂಪರೆ, ಸಂಸ್ಕೃತಿ, ನಂಬಿಕೆಗಳು ಎಲ್ಲಿಯೂ ದುರ್ಬಲವಾಗಬಾರದು ಅದನ್ನು ಇನ್ನಷ್ಟು ಗಟ್ಟಿಯಾಗಿಸಿ ಮುಂದಿನ ತಲೆಮಾರಿಗೆ ಹಸ್ತಾಂತರ ಮಾಡಬೇಕು ಎಂದರು. ಧರ್ಮ ಕ್ಷೇತ್ರಗಳು, ಶ್ರದ್ಧಾ ಕೇಂದ್ರಗಳು ನಮಗೆ ಆಧಾರ, ಅದುವೇ ಬದುಕಿಗೆ ದೀಪಸ್ತಂಭ ಎಂದು ಹೇಳಿದರು.

ಹಕ್ಕೊತ್ತಾಯ ಸಭೆಯನ್ನು ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗ್ಗೆ ಅವಹೇಳನ ಅಪಪ್ರಚಾರ ನಡೆದಾಗ ನಾವು ಮೂಕ ಪ್ರೇಕ್ಷಕರಾಗಬಾರದು. ನಮ್ಮ ಶ್ರದ್ಧಾ ಕೇಂದ್ರಗಳ ಬಗ್ಗೆ ಅವಹೇಳನ ಆದರೆ ಅದರ ವಿರುದ್ಧ ಪ್ರತಿಭಟಿಸುವುದು ನಮ್ಮಕರ್ತವ್ಯ ಎಂದು ಅವರು ಹೇಳಿದರು.
ಎಂ.ಬಿ.ಫೌಂಢೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ, ಧಾರ್ಮಿಕ ಮುಖಂಡ ರಾಜೇಶ್ ಶೆಟ್ಟಿ ಮೇನಾಲ ಮುಖ್ಯ ಭಾಷಣ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗದ ಅಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಶಾರದಾಂಬಾ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್, ಚೆನ್ನಕೇಶ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗದ ಕಾರ್ಯದರ್ಶಿ ಅಶೋಕ್ ಪ್ರಭು, ಸಂಚಾಲಕ ಎಂ.ವೆಂಕಪ್ಪ ಗೌಡ, ಕೋಶಾಧಿಕಾರಿ ನಾರಾಯಣ ಕೇಕಡ್ಕ, ವಿವಿಧ ಕ್ಷೇತ್ರಗಳ, ಭಜನಾ ಮಂದಿರಗಳ ಸಂಘ ಸಂಸ್ಥೆಗಳ ಪ್ರಮುಖರಾದ

ಎಸ್.ಎನ್.ಮನ್ಮಥ, ಪಿ.ಸಿ.ಜಯರಾಮ, ವೆಂಕಟ್ ವಳಲಂಬೆ, ಲೋಕನಾಥ ಅಮೆಚೂರ್, ಬಿ.ನಾಗಕುಮಾರ್ ಶೆಟ್ಟಿ, ಪಿ.ಕೆ.ಉಮೇಶ್, ವಿಷ್ಣುಕಿರಣ್ ಭಟ್, ದೀಪಕ್ ಕುತ್ತಮೊಟ್ಟೆ ಮಧುಸೂದನ್ ಕೆ., ಕೇಶವ ಕೊಳಲುಮೂಲೆ, ಗಿರಿಧರ ಸ್ಕಂದ, ಬಾಲಕೃಷ್ಣ ನಾಯ್ಕ್ ಅಜ್ಜಾವರ, ಮಲ್ಲೇಶ್ ಬೆಟ್ಟಂಪಾಡಿ, ಎ.ಕೆ. ಮಣಿಯಾಣಿ, ಐತ್ತಪ್ಪ ರೈ ಅಜ್ಜಂಗಳ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗದ ಕಾರ್ಯದರ್ಶಿ ಅಶೋಕ್ ಪ್ರಭು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ನಾರಾಯಣ ಕೇಕಡ್ಕ ವಂದಿಸಿದರು. ಸವಿತಾ ಸಂದೇಶ್ ಪ್ರಾರ್ಥನೆ ಹಾಡಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.












