ಸುಬ್ರಹ್ಮಣ್ಯ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿಕೂಟದ ನಡುವೆ ಸೀಟು ಹಂಚಿಕೆಯ ಬಗ್ಗೆ ದಸರಾ ಕಳೆದ ಬಳಿಕ ಚರ್ಚೆ ನಡೆಯಲಿದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಸಲುವಾಗಿ ಭೇಟಿ ನೀಡಿರುವ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರು ಈಗಾಗಲೇ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಜೊತೆ ಮೈತ್ರಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಂಸತ್ ಅಧಿವೇಶನ
ಕಳೆದ ಬಳಿಕ ಆರೋಗ್ಯ ಸುಧಾರಿಸಿದರೆ ನಾನು, ಇಲ್ಲವೇ ಕುಮಾರಸ್ವಾಮಿ ಅವರು ಮತ್ತೆ ಕೇಂದ್ರ ಗೃಹಮಂತ್ರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಲಿದ್ದೇವೆ’ ಎಂದರು.
‘ಮೈತ್ರಿಗೆ ಮೊದಲೇ ಪಕ್ಷದ 19 ಶಾಸಕರು ಹಾಗೂ 8 ವಿಧಾನ ಪರಿಷತ್ ಸದಸ್ಯರು, ಪಕ್ಷದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಜೊತೆ ಎರಡು ಸುತ್ತುಗಳ ಮಾತುಕತೆ ನಡೆಸಲಾಗಿದೆ. ಆ ಬಳಿಕವೇ ಕುಮಾರಸ್ವಾಮಿ ಅವರು ಗೃಹಮಂತ್ರಿಗಳನ್ನು ಭೇಟಿ ಮಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು. ಹಿಂದಿನ ಚುನಾವಣೆಗಳಲ್ಲಿ ಪಕ್ಷವಾರು ಮತಗಳಿಕೆ ಆಧರಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಗಳ ನಡುವಿನ ಸೀಟು ಹಂಚಿಕೆ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುತ್ತದೆ. ಆದರೆ ಮಂಡ್ಯ ಕ್ಷೇತ್ರವೂ ಸೇರಿದಂತೆ ಯಾವ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಟಿಕೆಟ್ ನೀಡಲಾಗುತ್ತದೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಎಂದು ಹೇಳಿದರು.’ಕಾಂಗ್ರೆಸ್ 28ರಲ್ಲಿ ಎಲ್ಲ ಕ್ಷೇತ್ರಗಳನ್ನೂ ಗೆಲ್ಲುವ ಉತ್ಸಾಹದಲ್ಲಿದೆ. ಆ ಕಾರಣಕ್ಕೆ ಬಿಜೆಪಿ ಮತ್ತು ಜೆಡಿಎಸ್ ಒಂದುಗೂಡಿ ಚುನಾವಣೆ ಎದುರಿಸುವ ನಿರ್ಧಾರಕ್ಕೆ ಬಂದಿದ್ದೇವೆ’ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಉಪಸ್ಥಿತರಿದ್ದರು.





