ಸುಳ್ಯ:ವರುಷಕ್ಕೆ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆದು ಭಕ್ತರಿಗೆ ದರುಶನ ಭಾಗ್ಯ ನೀಡುವ ಅಪೂರ್ವ ದೈವಸ್ಥಾನ ಸುಳ್ಯ ತಾಲೂಕಿನ ಕಾಂತಮಂಗಲ ಕುರುಂಜಿಯ
ಶ್ರೀ ಗುತ್ಯಮ್ಮ ದೇವಿ ಮತ್ತು ಸಪರಿವಾರ ದೈವಸ್ಥಾನದಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿದ್ದು ಜ.31ರಂದು ಶ್ರೀ ಕ್ಷೇತ್ರದ ಗರ್ಭಗುಡಿಯ ಬಾಗಿಲು ತೆರೆದು ಪೂಜೆ ಸಲ್ಲಿಸಿ ಭಕ್ತರಿಗೆ ದರ್ಶನ ನೀಡಲಾಗುತ್ತದೆ. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ‘ಕಮಿಟಿ ಬಿ’ ಇದರ ಚೆಯರ್ಮೆನ್ ಡಾ.ರೇಣುಕಾಪ್ರಸಾದ್ ಕೆ.ವಿ. ಧರ್ಮದರ್ಶಿಗಳಾಗಿರುವ ಸಂಪೂರ್ಣ ಶಿಲಾಮಯವಾಗಿ
ಕಂಗೊಳಿಸುತ್ತಿರುವ ಕ್ಷೇತ್ರದಲ್ಲಿ ಜ.29ರಿಂದ 31ರ ತನಕ
3 ದಿನಗಳ ಕಾಲ ಸಂಭ್ರಮದ ವಾರ್ಷಿಕ ಉತ್ಸವ ದೈವಜ್ಞರಾದ ಕಾರ್ಕಳ ಕೊಂಡೆಜಾಲು ಶ್ರೀ ಸೀತಾರಾಮ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯುತಿದೆ. ಜ.29ರಂದು ಗೋಧೂಳಿ ಲಗ್ನದಲ್ಲಿ ಶ್ರೀ ಕ್ಷೇತ್ರ ಗುತ್ಯಮ್ಮ ದೇವಿ ಸನ್ನಿಧಾನದಲ್ಲಿ ಕವಾಟ ಉದ್ಘಾಟನೆ. ದೇವತಾ ಪ್ರಾರ್ಥನೆ, ಪುಣ್ಯಾಹವಾಚನೆ ಸಪ್ತಶುದ್ದಿ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ ನಡೆಯಿತು.

ಇಂದು (ಜ.30ರಂದು) ಬೆಳಿಗ್ಗೆ ಪಂಚಗವ್ಯ ಪುಣ್ಯಾಹ ವಾಚನ, ನಾಗಬನದಲ್ಲಿ ಪ್ರಧಾನ ಹೋಮ, ನವಕ ಕಲಶಾರಾಧನೆ, ಬಿಂಬಶುದ್ದಿ, ಪಂಚಾಮೃತ, ಕಲಶಾಭಿಶೇಕ, ಪವಮಾನ ಸೂಕ್ತಯಾಗ, ಆಶ್ಲೇಷಾ ಬಲಿದಾನ, ರಕ್ತೇಶ್ವರಿ ದೇವಿಗೆ ನವಕ, ಪ್ರಧಾನಹೋಮ, ಕಲಶಾಭಿಷೇಕ ಪಂಚ ಪರ್ವ, ಪ್ರಸನ್ನ ಪೂಜೆಗಳು ಪ್ರಸಾದ ವಿತರಣೆ ನಡೆಯಲಿದೆ. ಸ್ವಸ್ತಿ ಪಂಚಗವ್ಯ ಪುಣ್ಯಾಹವಾಚನ, ಗಣಪತಿ ಹೋಮ ಪೂರ್ವಕ ಬ್ರಹ್ಮದೇವರಿಗೆ ಮತ್ತು ಗುತ್ಯಮ್ಮ ದೇವಿಗೆ ಪಂಚವಿಂಶತಿ ಕಲಶಾರಾಧನೆ, ಪರಿವಾರ ಶಕ್ತಿ ದೇವತೆಗಳಿಗೆ ಪ್ರತ್ಯೇಕ, ಪ್ರತ್ಯೇಕ ನವಕ ಕಲಶಾರಾಧನೆ, ಪ್ರಧಾನ ಹೋಮಗಳು, ಪಂಚಗವ್ಯ ಪಂಚಾಮೃತ ಬಿಂಬಶುದ್ಧಿ ಪೂರ್ವಕ ಕಲಾಶಾಭಿಷೇಕ ಅಲಂಕಾರ, ರಜತ ಪೀಠ ಅರ್ಪಣೆ, ಪಂಚಪರ್ವ ಪೂಜೆ, ಪ್ರಸನ್ನ ಪೂಜೆ, ಪ್ರಾರ್ಥನೆ, ಸಿರಿಮುಡಿ ಗಂಧ ಪ್ರಸಾದ ವಿತರಣೆ ನಡೆಸು ರಾತ್ರಿ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಜ.31ರಂದು
ಬೆಳಗ್ಗೆ ಗಂಟೆ 8ರಿಂದ
ಸ್ವಸ್ತಿ ಪುಣ್ಯಾಹವಾಚನೆ, ನವಗ್ರಹ ಹೋಮ ಮತ್ತು ಚಂಡಿಕಾ ಹೋಮ 11.30ಕ್ಕೆ ಸರಿಯಾಗಿ ಪೂರ್ಣಾಹುತಿ ನಂತರ ದೇವರಿಗೆ ಕಲಶಾಭಿಷೇಕ ಪರಿವಾರ ಪೂಜೆ, ಪ್ರಸನ್ನ ಪೂಜೆ ಸಂಪನ್ನಗೊಂಡು ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ ಗಂಟೆ 1.00ರಿಂದ ಅನ್ನಸಂತರ್ಪಣೆ ಸಾಯಂಕಾಲ ಗಂಟೆ 5ಕ್ಕೆ ಸಂಧ್ಯಾಕಾಲ ಶ್ರೀ ದೇವಿ ಗುತ್ಯಮ್ಮ ಸನ್ನಿಧಾನದಲ್ಲಿ ರಂಗ ಪೂಜೆ ಪ್ರಸನ್ನ ಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಲಿದೆ.