ಗುತ್ತಿಗಾರು:ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂರು ವರುಷ, ಶತಮಾನ ಪೂರೈಸಿದ ಹರುಷ. ಈ ಹಿನ್ನಲೆಯಲ್ಲಿ ನಾಳೆ (ನ.23) ಶತಮಾನೋತ್ಸವ ಆಚರಣೆ ನಡೆಯಲಿದೆ.1923ನೇ ಇಸವಿಯಲ್ಲಿ ಆರಂಭಗೊಂಡ ಸಹಕಾರ ಸಂಘವು ಇದೀಗ 100 ವರ್ಷ ಪೂರೈಸಿ 101ನೇ ವರ್ಷದಲ್ಲಿ ಮುನ್ನಡೆಯುತಿದೆ.ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 24 ಸದಸ್ಯ 246 ಪಾಲು ಬಂಡವಾಳದೊಂದಿಗೆ ದಿ.ಪುಲ್ಲಡ್ಕ ಶಿವರಾಯರ ಅಧ್ಯಕ್ಷತೆಯಲ್ಲಿ ಸಹಕಾರ ಪಿತಾಮಹ ದಿ.ಮೊಳಹಳ್ಳಿ ಶಿವರಾಯರ ಮಾರ್ಗದರ್ಶನದಲ್ಲಿ ಗುತ್ತಿಗಾರಿನಲ್ಲಿ ಆರಂಭಗೊಂಡಿತು. 1935ನೇ ಇಸವಿಯಲ್ಲಿ ಈಗಿನ ನಾಲ್ಕೂರು ಗ್ರಾಮದಲ್ಲಿ ಅಮರ ನಾಲ್ಕೂರು ಸೇವಾ ಸಹಕಾರಿ ಬ್ಯಾಂಕು ಎಂಬ
ಹೆಸರಿನಲ್ಲಿ 23 ಸದಸ್ಯರನ್ನೊಳಗೊಂಡ ರೂ.291 ಪಾಲು ಬಂಡವಾಳದಲ್ಲಿ ದೇರಪ್ಪಜ್ಜನ ಮನೆ ವೀರಪ್ಪ ಗೌಡರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು.1959 ನೇ ಇಸವಿಯಲ್ಲಿ ಗುತ್ತಿಗಾರು ಸಿ ಎ ಬ್ಯಾಂಕು ಮತ್ತು ಅಮರ ನಾಲ್ಕೂರು ಸಹಕಾರಿ ಬ್ಯಾಂಕು ಒಂದುಗೂಡಿ ಗುತ್ತಿಗಾರಿನಲ್ಲಿ ಕೇಂದ್ರ ಕಚೇರಿ ಹೊಂದಿ ಗುತ್ತಿಗಾರು ಸಿಎ ಬ್ಯಾಂಕು ಆರಂಭಗೊಂಡಿತು.1976 ರಲ್ಲಿ ಅಂದಿನ ಕರ್ನಾಟಕ ರಾಜ್ಯ ಸರಕಾರದ ಆದೇಶದಂತೆ ಗುತ್ತಿಗಾರು ಸಿ.ಎ ಬ್ಯಾಂಕಿನೊಂದಿಗೆ ವಿಲೀನಗೊಂಡು ಗುತ್ತಿಗಾರು ವ್ಯವಸಾಯ ಸೇವಾ ಸಹಕಾರ ಸಂಘ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭವಾಯಿತು. ಆಗ ಬಿ. ವೀರಪ್ಪಗೌಡರು ಅಧ್ಯಕ್ಷರಾಗಿ, ಯಸ್. ರಾಧಾಕೃಷ್ಣಗೌಡರು ಕಾರ್ಯದರ್ಶಿಯಾಗಿ ಕಾರ್ಯನಿರ್ವ ಹಿಸುತ್ತಿದ್ದರು. ಆ ಸುದರ್ಭ 546 ಜನ ಸದಸ್ಯರನ್ನು ಹೊಂದಿ, ರೂ.2.11 ಲಕ್ಷಪಾಲು ಬಂಡವಾಳ ಹೊಂದಿತ್ತು. ಇದೀಗ ದಿನಾಂಕ 31.10.2024ಕ್ಕೆ 6,104 ಜನ ಸದಸ್ಯರಿದ್ದು, 12.21 ಕೋಟಿ ಪಾಲು ಬಂಡವಾಳ ಹೊಂದಿದೆ.ರೂ 37.46 ಕೋಟಿ ಠೇವಣಿ ಸಂಗ್ರಹಿಸಿ 3.34 ಕೋಟಿ ಕ್ಷೇಮ ನಿಧಿ ಮತ್ತಿತರ ನಿಧಿಗಳನ್ನು ಹೊಂದಿರುತ್ತದೆ.
ಸದಸ್ಯರ ಸಾಲ ಪೂರೈಕೆಗಾಗಿ ದ.ಕ.ಜಿ.ಕೇ. ಸಹಕಾರಿ ಬ್ಯಾಂಕಿನಿಂದ ರೂ. 65.54 ಕೋಟಿ ರೂ. ಸಾಲ ಪಡಕೊಂಡಿರುತ್ತದೆ. ಸದಸ್ಯರಿಗೆ ಕೊಟ್ಟ ಹೊರ ಬಾಕಿ ಸಾಲ ರೂ. 89.23 ಕೋಟಿಗಳಾಗಿದ್ದು, ಶೇ.99.16 ವಸೂಲಾತಿ ಸಾಧಿಸಿದೆ. 2023-24 ರಲ್ಲಿ ಬ್ಯಾಂಕು 1.64 ಕೋಟಿ ನಿವ್ವಳ ಲಾಭ ಗಳಿಸಿದ್ದು, ಆಡಿಟ್ನಲ್ಲಿ ಅತ್ಯುತ್ತಮ ಸಹಕಾರ ಬ್ಯಾಂಕಿಗೆ ಕೊಡುವ ಎ ವರ್ಗಿಕರಣ ಲಭಿಸಿರುತ್ತವೆ. ಸಂಘದ ಕಾರ್ಯವ್ಯಾಪ್ತಿಯಲ್ಲಿ ಒಟ್ಟು ಮೂರು ಗ್ರಾಮಗಳಿದ್ದು ಗುತ್ತಿಗಾರು, ನಾಲ್ಕೂರು, ದೇವಚಳ್ಳ ಗ್ರಾಮಗಳು ಒಳಪಡುತ್ತವೆ. ಸಂಘವು ನಾಲ್ಕು ಶಾಖೆಗಳನ್ನು ಹೊಂದಿದ್ದು ಸಂಘವು ಸುವರ್ಣ ಸಹಕಾರ ಮಾರ್ಟ್, ಭಾರತ್ ಪೆಟ್ರೋಲ್ ಪಂಪ್, ಗ್ರಾಮವನ್ ಕೇಂದ್ರ, ರಸಗೊಬ್ಬರ ಮಾರಾಟ, ವಿಶಾಲವಾದ ಸಭಾಂಗಣ, ಪಾರ್ಕಿಂಗ್ ಮತ್ತಿತರ ವ್ಯವಸ್ಥೆ ಹೊಂದಿ, ಸಂಸ್ಥೆ ಜನರಿಗೆ ಇನ್ನಷ್ಟು ಹತ್ತಿರವಾಗಿದೆ.
ಸಂಘದಲ್ಲಿ ಒಟ್ಟು 2227 ಮಂದಿ ಪಡಿತರಚೀಟಿ ಹೊಂದಿದೆ. ಸಂಘದಲ್ಲಿ ಒಟ್ಟು 18 ಮಂದಿ ಖಾಯಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದ ವತಿಯಿಂದ ಸಿಬ್ಬಂದಿಗಳಿಗೆ ಆರೋಗ್ಯ ವಿಮೆಯನ್ನು ಮಾಡಿಸಲಾಗಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಎ ವರ್ಗೀಕರಣವನ್ನು ಹೊಂದಿರುತ್ತದೆ.ಸಂಘವು ವಿಶೇಷವಾಗಿ ಕೋವಿಡ್ -19 ಸಂದರ್ಭದಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿನ ಆಶಾಕಾರ್ಯಕರ್ತೆಯರಿಗೆ ಸಂಘದ ವತಿಯಿಂದ ಸಹಾಯಧನ, ಗುತ್ತಿಗಾರು ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಧನಸಹಾಯದ ರೂಪದಲ್ಲಿ ಸಹಕಾರ ನೀಡಲಾಗಿರುತ್ತದೆ.
ಸಂಘವು ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರದ
ಹಲವಾರು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ ನಿರಂತರ ಶ್ರದ್ದೆಯಿಂದ ಕಾರ್ಯಪ್ರವೃತವಾಗಿದೆ. ರೈತರಿಗೆ ಶೇ.3ರ ಬಡ್ಡಿ ದರದಲ್ಲಿ ಮಧ್ಯಮಾವಧಿ/ದೀರ್ಘಾವಧಿ ಕೃಷಿಸಾಲ ವಿತರಣೆ, ಸ್ವಸಹಾಯ ಸಂಘಗಳಿಗೆ ಎಲ್ಲಾ ಉದ್ದೇಶಗಳಿಗೂ ಸಾಲ ವಿತರಣೆ ಮಾಡುತ್ತದೆ.
ವೆಂಕಟ್ ದಂಬೆಕೋಡಿ
ಸಾಧನೆಯ ಹಾದಿಯಲ್ಲಿ:
ಕಂದ್ರಪ್ಪಾಡಿ ಎಂಬಲ್ಲಿ0.10 ಎಕ್ರೆ ವಿಸ್ತೀರ್ಣದ ನಿವೇಶನ ಇದ್ದು 100 ಮೆ.ಟ. ಸಾಮರ್ಥ್ಯದ ಗೋದಾಮು ಮತ್ತು ಕಛೇರಿ ಕಟ್ಟಡ ಇದೆ. ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ 0.10 ಎಕರೆ ಜಾಗದಲ್ಲಿ 100 ಮೆ.ಟ. ಸಾಮರ್ಥ್ಯ ಗೋದಾಮು, ಕಚೇರಿ ಕಟ್ಟಡ ಇದೆ. ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲಿ 0.10 ಎಕ್ರೆ 100 ಮೆ.ಟನ್ ಸಾಮರ್ಥ್ಯದ ಗೋದಾಮು ಮತ್ತು ಕಛೇರಿ ಕಟ್ಟಡವನ್ನು ಹೊಂದಿದೆ. ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ಸುಳ್ಯ – ಸುಬ್ರಹ್ಮಣ್ಯ ಪ್ರಧಾನ ರಸ್ತೆಗೆ ತಾಗಿ ಗುತ್ತಿಗಾರಿನಲ್ಲಿ ಕೇಂದ್ರ ಕಚೇರಿ ಕಟ್ಟಡ ಇದೆ. ಸಂಘವು 2.06 ಎಕ್ರೆ ವಿಸ್ತೀರ್ಣದ ಸ್ವಂತ ಪಟ್ಟಾ ಭೂಮಿ ಹೊಂದಿದ್ದು, ಸುಸಜ್ಜಿತ ಕಛೇರಿ ಹೊಂದಿರುವ ಸ್ವಂತ ಕಟ್ಟಡ, 500 ಮೆ.ಟನ್ ಸಾಮರ್ಥ್ಯದ 3 ಗೋದಾಮುಗಳು, ವಿಶಾಲವಾದ ಸಭಾಂಗಣ ಹೊಂದಿದೆ. ಅಲ್ಲದೇ ಸಂಘದ ಸ್ವಂತ ಜಾಗದಲ್ಲಿ ಭಾರತ್ ಪೆಟ್ರೋಲಿಯಂನ ಪೆಟ್ರೋಲ್ ಪಂಪು ಹೊಂದಿದೆ. ಅಲ್ಲದೆ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ 0.10 ಎಕ್ರೆ ವಿಸ್ತೀರ್ಣ ಸ್ವಂತ ನಿವೇಶನವಿದ್ದು 100 ಮೆ.ಟನ್ ಸಾಮರ್ಥ್ಯದ ಒಂದು ಕಚೇರಿ ಕಟ್ಟಡ ಮತ್ತು ಗೋದಾಮು ಇದೆ.ಇದು 100 ವರ್ಷ ಪೂರೈಸಿದ ಗುತ್ತಿಗಾರು ಸಹಕಾರಿ ಸಂಘದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಇದೆಲ್ಲಾ ಜನರಿಗೆ ನೀಡುತ್ತಿರುವ ಪ್ರಾಮಾಣಿಕ ಸೇವೆಯಿಂದಾಗಿ ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು.
ಪುಲಡ್ಕ ಸುಬ್ರಾಯರವರು ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ಆರಂಭಗೊಂಡ ಸಂಸ್ಥೆ ಅನೇಕ ಅಧ್ಯಕ್ಷರು, ನಿರ್ದೇಶಕರುಗಳನ್ನು ಹೊಂದಿ ಪ್ರಸ್ತುತ ಆಡಳಿತ ಮಂಡಳಿಯಲ್ಲಿ 13 ಮಂದಿ ನಿರ್ದೇಶಕರನ್ನು ಹೊಂದಿದೆ.
ಪ್ರಸ್ತುತ ವೆಂಕಟ್ ದಂಬೆಕೋಡಿ ಸಾರಥ್ಯದಲ್ಲಿ ಸಂಸ್ಥೆಯು ಮುನ್ನಡೆಯುತ್ತಿದೆ. ರಾಜಕೀಯ, ಸಾಮಾಜಿಕ, ಸಹಕಾರ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ವೆಂಕಟ್ ದಂಬೆಕೋಡಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಇದೀಗ ನೂರನೇ ವರ್ಷದಲ್ಲಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
100 ವರ್ಷಗಳ ಹಿಂದೆ ನಮ್ಮ ಹಿರಿಯರು ಆರಂಭಿಸಿದ ಸಂಸ್ಥೆಯ ಶತಮಾನೋತ್ಸವ ಆಚರಿಸುವ ಯೋಗ ನಮಗೆ ಬಂದಿದೆ. ಗೃಹ ಸಾಲ, ಇತರೇ ಸಾಲಗಳು, ರಸಗೊಬ್ಬರ, ಸಹಕಾರಿ ಮಾರ್ಟ್, ಪೆಟ್ರೋಲ್ ಪಂಪ್, ಗ್ರಾಮ ಒನ್ ಕೇಂದ್ರ ಮತ್ತಿತರ ವ್ಯವಸ್ಥೆಗಳು ಎಲ್ಲರ ಸಹಕಾರದಲ್ಲಿ ಯಶಸ್ವಿಯಾಗಿ ನಡೆಯುತಿದೆ. ಮುಂದಿನ ದಿನಗಳಲ್ಲಿ ಬಿಪಿಸಿಎಲ್ ಪೆಟ್ರೋಲ್ ಪಂಪ್(ಗ್ಯಾಸ್ ಫಿಲ್ಲಿಂಗ್) ಅಲ್ಲದೆ ವಾಣೀಜ್ಯ ಸಂಕೀರ್ಣ ನಿರ್ಮಾಣ ಮಾಡುವ ಗುರಿ ಇದೆ ಎಂದು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಹೇಳಿದ್ದಾರೆ.
ನಾಳೆ ಶತಮಾನೋತ್ಸವ ಕಾರ್ಯಕ್ರಮ:
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮ ನ.23ರಂದು ನಡೆಯಲಿದೆ. ಪೂ.10ಕ್ಕೆ ಶತಮಾನೋತ್ಸವ ಸಂಭ್ರಮವನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದಾರೆ. ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಅವರು ‘ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ
ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಎಸ್. ಅಂಗಾರ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರುಗಳಾದ ಶಶಿಕುಮಾರ್ ರೈ ಬಾಲ್ಗೊಟ್ಟು, ಎಸ್. ಎನ್. ಮನ್ಮಥ, ದ.ಕ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕ್ಯಾಂಪ್ಲೋ ನಿರ್ದೆಶಕ ಕೃಷ್ಣಪ್ರಸಾದ್ ಮಡ್ತಿಲ,
ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಮೂಕಮಲೆ, ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಂಘದ ಅಧ್ಯಕ್ಷ ಸಹಕಾರ ರತ್ನ ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಮುಳಿಯ ತಿಮ್ಮಪ್ಪಯ್ಯ ಅವರು ಉಪಸ್ಥಿತರಿರಲಿದ್ದಾರೆ. ಅ.2.30ರಿಂದ
ಶತಮಾನೋತ್ಸವದ ಪ್ರಯುಕ್ತ ಅಪರಾಹ್ನ ಕೃಷಿ ವಿಚಾರಗೋಷ್ಠಿ, ನಡೆಯಲಿದೆ. ಸಂಜೆ 7ರಿಂದ ‘ಮಂಗಳೂರಿನ ಲಕುಮಿ ತಂಡದ ಕುಸಾಲ್ದ ಕಲಾವಿದರಿಂದ ‘ಒರಿಯಾಂಡಲಾ ಸರಿಬೋಡು’ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ತಿಳಿಸಿದ್ದಾರೆ.