ಮಂಡ್ಯ:ಗುರುದೇವ ಆಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಯ ವತಿಯಿಂದ ಮಂಡ್ಯ ನಗರದಲ್ಲಿ ಸೆ.14ರಿಂದ ಮೂರು ದಿನಗಳ ಕಾಲ ಗುರುದೇವೋತ್ಸವ- 2024 ಶೀರ್ಷಿಕೆಯಡಿ ಶಾಸ್ತ್ರೀಯ ನೃತ್ಯಗಳ ರಾಷ್ಟ್ರೀಯ ಹಬ್ಬ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಲಾ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ ತಿಳಿಸಿದ್ದಾರೆ.ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ
250ಕ್ಕೂ ಹೆಚ್ಚು ಭರತನಾಟ್ಯ ಕಲಾವಿದೆಯರು, ವಿದ್ಯಾರ್ಥಿಗಳು ಕಲಾ ಪ್ರದರ್ಶನ ನೀಡುವರು. ಇದರೊಂದಿಗೆ ಸಮಾರಂಭದಲ್ಲಿ ನಾಲ್ಕು ಮಂದಿಗೆ ‘ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸೆ.14ರಂದು ಸಂಜೆ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಮಾರಂಭ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಕೂಚಿಪುಡಿ-ಕಥಕ್ಕಳಿ ಪ್ರತಿಪಾದಕ, ಕಲಾ ವಿಮರ್ಶಕ ಮುಂಬೈನ ವಿಜಯ್ ಶಂಕರ್ ಭಾಗವಹಿಸುವರು. ಮೊದಲ ದಿನ ಶ್ರೀ ನಟರಾಜ ಕಲಾನಿಕೇತನ್ ನಿರ್ದೇಶಕ ಪ್ರಕಾಶ್ ಐಯರ್ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಗುವುದು,” ಎಂದರು.
ಸೆ.15ರಂದು ಸಂಜೆ 4 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಗೌರವ ಖಜಾಂಚಿ ಬಿ.ಎಂ.ಅಪ್ಪಾಜಪ್ಪ ಅಧ್ಯಕ್ಷತೆಯಲ್ಲಿ ಎರಡನೇ ದಿನದ ಕಾರ್ಯಕ್ರಮ ನಡೆಯಲಿದೆ. ಪಾಂಡವಪುರ ತಹಸೀಲ್ದಾರ್ ಎಸ್.ಸಂತೋಷ್, ಮಂಡ್ಯ ನಗರಸಭೆ ಮಾಜಿ ಉಪಾಧ್ಯಕ್ಷೆ ಇಂದಿರಾ ಸತೀಶ್ಬಾಬು, ಜನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್ ಭಾಗವಹಿಸುವರು. ಮಂಡ್ಯದ ಬೆಳಕು ವಿನ್ಯಾಸ ಕಲಾವಿದೆ ಎಂ.ಎಲ್.ರಾಜನ್, ಮೈಸೂರಿನ ಶ್ರೀಗುರು ಪುಟ್ಟರಾಜ ಸಂಗೀತ ವಿದ್ಯಾಲಯದ ನಿರ್ದೇಶಕ, ತಬಲ ಕಲಾವಿದ ಪಂಡಿತ್ ಭೀಮಾಶಂಕರ್ ಬಿದನೂರ್ ಅವರಿಗೆ ಗುರುದೇವ ಪ್ರಶಸ್ತಿ ನೀಡಲಾಗುವುದು ಎಂದು ವಿವರಿಸಿದರು.
ಸೆ.16ರಂದು ನಡೆಯುವ ಮೂರನೇ ದಿನದ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭವು ಮಂಡ್ಯದ ಜನತಾ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ವಿದುಷಿ ಶುಭಾ ಧನಂಜಯ್ ಅವರಿಗೆ ಗುರುದೇವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಖ್ಯಾತ ಮನೋವೈದ್ಯ ಟಿ.ಎಸ್. ಸತ್ಯನಾರಾಯಣ ರಾವ್, ಎಸ್.ಬಿ. ಎಜುಕೇಷನ್ ಟ್ರಸ್ಟ್ನ ಕಾಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ. ನಂದೀಶ್, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಚಂದ್ರನಾಯಕ ಭಾಗವಹಿಸುವರು ಎಂದು ಹೇಳಿದರು.
ಗುರುದೇವ ಸಂಸ್ಥೆಯಲ್ಲಿ ಭರತನಾಟ್ಯ ಕಲಿತ ನೂರಾರು ವಿದ್ಯಾರ್ಥಿಗಳು ಗುರುದೇವೋತ್ಸವದಲ್ಲಿ ಪಾಲ್ಗೊಂಡು ಭರತನಾಟ್ಯ ಪ್ರದರ್ಶಿಸುವರು. ಇದರೊಂದಿಗೆ ಬೆಂಗಳೂರು, ಮೈಸೂರು, ಮುಂಬಯಿ, ನೋಯ್ಡಾ ಸೇರಿದಂತೆ ದೇಶದ ನಾನಾ ಭಾಗಗಳಿಂದಲೂ ಕಲಾವಿದೆಯರು ಆಗಮಿಸಿ ಕಲಾ ಪ್ರದರ್ಶನ ನೀಡಲಿದ್ದಾರೆ. ಕಡೆಯ ದಿನದಂದು ವಾಲ್ಮೀಕಿ ಕಥೆಯನ್ನು ಆಧರಿಸಿದ ವಿಶೇಷ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದು ಡಾ.ಚೇತನಾ ರಾಧಾಕೃಷ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುದೇವ ಆಕಾಡೆಮಿ ಆಫ್ ಫೈನ್ ಆರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ. ರಾಧಾಕೃಷ್ಣ, ಕಲಾವಿದ ಎಂ.ಎಲ್. ರಾಜನ್ ಹಾಜರಿದ್ದರು.